ಆಹಾರ ಅದಾಲತ್‌ಗೆ ಡಿಸಿ ಭೇಟಿ

Updated on: 

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 7
ತಾಲೂಕಿನ ಯರಿಕೊಪ್ಪ ಹಾಗೂ ಅಂಬ್ಲಿಕೊಪ್ಪ ಗ್ರಾಮಗಳಲ್ಲಿ ಸೋಮವಾರ ನಡೆದ ಆಹಾರ ಅದಾಲತ್‌ಗೆ ಏಕಾಏಕಿ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್, ಅದಾಲತ್ ಕಾರ್ಯ ವೈಖರಿ ಪರಿಶೀಲಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳೊಂದಿಗೆ ಯರಿಕೊಪ್ಪ ಹಾಗೂ ಅಂಬ್ಲಿಕೊಪ್ಪ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿದ್ದ ಆಹಾರ ಅದಾಲತ್‌ಗೆ ಭೇಟಿ ನೀಡಿ ಪಡಿತರ ಪಡೆಯುತ್ತಿರುವ ಫಲಾನುಭವಿಗಳ ಸಮಸ್ಯೆಗಳನ್ನೂ ಆಲಿಸಿದರು. ಪ್ರತಿ ತಿಂಗಳ ದಿ.7ರಂದು ಆಹಾರ ಅದಾಲತ್ ನಡೆಯಲಿದ್ದು, ಈ ಮೂಲಕ ಬೋಗಸ್ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗುವುದು. ಇದುವರೆಗೂ ಅಂತಹ ಕಾರ್ಡ್ ಪತ್ತೆಯಾಗಿಲ್ಲ ಎಂದರು.
ರೇಶನ್ ಕಾರ್ಡ್‌ಗೆ ಅರ್ಜಿ ಹಾಕಿ ಐದಾರು ತಿಂಗಳಾದರೂ ಕಾರ್ಡ್ ಬಂದಿಲ್ಲ ಹಾಗೂ ಪಡಿತರಕ್ಕಾಗಿ ಸಂದೇಶ ಕಳುಹಿಸುವ ವ್ಯವಸ್ಥೆ ಗೊತ್ತಾಗುತ್ತಿಲ್ಲ ಎಂದು ದೂರಿದ ಗ್ರಾಮಸ್ಥರು, ಒಂದು ದಿನದ ಬದಲು ಮೂರು ದಿನ ಪಡಿತರ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.
ಫಲಾನುಭವಿಗಳ ಸಮಸ್ಯೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಚುನಾವಣೆ ನೀತಿ ಸಂಹಿತೆಯಿಂದಾಗಿ ಹೊಸ ಚೀಟಿಗಳನ್ನು ನೀಡಿಲ್ಲ. ಹೊಸ ಪಡಿತರ ಚೀಟಿಗಳು ಈಗಾಗಲೇ ಮುದ್ರಣವಾಗಿದ್ದು, ಸದ್ಯದಲ್ಲಿಯೇ ವಿತರಿಸಲಾಗುವುದು. ಮೊಬೈಲ್ ಸಂದೇಶ ಕಳುಹಿಸಲು ಗ್ರಾಮ ಪಂಚಾಯಿತಿಗಳಲ್ಲೂ ವ್ಯವಸ್ಥೆ ಮಾಡಿದ್ದು ಅನಕ್ಷರಸ್ಥರು ಈ ವ್ಯವಸ್ಥೆ ಲಾಭ ಪಡೆಯಬೇಕು. ಇನ್ನು ಮುಂದೆ ಒಂದೇ ದಿನದ ಬದಲು ಮೂರು ದಿನ ಪಡಿತರ ನೀಡುವಂತೆ ಆಹಾರ ಇಲಾಖೆ ಉಪ ನಿರ್ದೇಶಕ ಸದಾಶಿವ ಮಿರ್ಜಿ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕುಡಿಯುವ ನೀರು ಅಶುದ್ಧವಾಗಿದ್ದು, ಮಕ್ಕಳಿಗೆ ವಾಂತಿ-ಬೇಧಿ ಶುರುವಾಗಿದೆ. ಶುದ್ಧ ಕುಡಿಯುವ ನೀರು ಕೊಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಅಲ್ಲದೇ, ಗ್ರಾಮದಲ್ಲಿ ಸ್ವಚ್ಛತೆ ಇಲ್ಲ ಎಂದು ಅಂಬ್ಲಿಕೊಪ್ಪ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು. ಕೂಡಲೇ ಸ್ಥಳಕ್ಕೆ ಪಿಡಿಓ ಬಿ.ಎಸ್. ದಾದೂಗೋಳ ಅವರನ್ನು ಕರೆಯಿಸಿ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಥತೆ ಕುರಿತು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ತಾಲೂಕು ಆಹಾರ ನಿರೀಕ್ಷಕ ಹಿರೇಮಠ, ಕಚೇರಿ ಅಧೀಕ್ಷಕ ಅಂಗಡಿ ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com