ರೈತರ ಹೊಲಗಳಲ್ಲಿ ಅಗಿ ಹಬ್ಬ

Updated on: 

 ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 11
ಒಬ್ಬೊಬ್ಬರೂ ಎಷ್ಟು ಗಿಡ ಬೇಕಾದರೂ ನೆಡಬಹುದು. ಆದರೆ, ಕೈಗೆ ಹಸಿರು ಕಂಕಣ ತೊಟ್ಟು, ನಾನು ನೆಟ್ಟ ಎಲ್ಲ ಗಿಡಗಳಿಗೂ ನೀರೆರೆದು ಪೋಷಿಸುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು, ಅದರಂತೆ ನಡೆದುಕೊಳ್ಳಬೇಕು.
ಪರಿಸರವಾದಿ ಡಾ೤ ಪ್ರಕಾಶ ಭಟ್ ನೇತೃತ್ವದಲ್ಲಿ 14 ವರ್ಷಗಳಿಂದ ಗಿಡ ನೆಡುವ ವಿಶಿಷ್ಟ ಕಾರ್ಯಕ್ರಮ ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ತಿಂಗಳಲ್ಲಿ ಧಾರವಾಡ ಸಮೀಪದ ನಿಗದಿ, ಬೆನಕಟ್ಟಿ, ಬೆಳ್ಳಿಗಟ್ಟಿ, ದೇವರ ಹುಬ್ಬಳ್ಳಿ, ಮುರಕಟ್ಟಿ ಹಾಗೂ ಬಾಡ ಗ್ರಾಮಗಳ 60 ರೈತರು 100 ಎಕರೆ ವಿಸ್ತಾರದ ಹೊಲಗಳ ಬದುವಿನ ಮೇಲೆ 28 ಸಾವಿರ ಗಿಡ ನೆಡಲು ಸಿದ್ಧರಾಗಿದ್ದಾರೆ. ಸೂರಶೆಟ್ಟಿಕೊಪ್ಪ, ಬಗಡಗೇರಿಯಲ್ಲಿ ಹಸಿರು ಹಬ್ಬದ ಹೆಸರಿನ ಮೂಲಕ ನಡೆದ ಈ ಕಾರ್ಯಕ್ರಮ ನಾಲ್ಕು ವರ್ಷಗಳಿಂದ ಅಗಿ ಹಬ್ಬವಾಗಿ ಪರಿವರ್ತನೆಗೊಂಡಿದೆ.
ಗಿಡ ನೆಡುವುದು ಸಂಭ್ರಮವಾಗಬೇಕೆಂಬ ಉದ್ದೇಶದಿಂದ ಪ್ರತಿ ಮಳೆಗಾಲದಲ್ಲೂ ಅಗಿ ಹಬ್ಬ ಆಚರಿಸಲಾಗುತ್ತಿದೆ. ಆಸಕ್ತ ರೈತರನ್ನು ಸಭೆ ಸೇರಿಸಿ, ಚರ್ಚಿಸಿ, ಅವರು ತಮ್ಮ ಹೊಲಗಳ ಬದುಗಳಲ್ಲಿ ಗಿಡಗಳನ್ನು ನೆಡುತ್ತಾರೆ. ನೀರೆರೆದು ಪೋಷಿಸುತ್ತಾರೆ. ರೈತರಿಗೂ ಲಾಭದಾಯಕ ಹಾಗೂ ಪರಿಸರಕ್ಕೂ ಅನುಕೂಲ ಎಂಬ ಕಾರಣಕ್ಕೆ ಗಿಡ ನೆಡುವ ಸಂಸ್ಕೃತಿಯನ್ನು ಬೆಳೆಸಿದ್ದಾಗಿ ಅಗಿ ಹಬ್ಬದ ರುವಾರಿ, ಬೈಫ್ ಸಂಸ್ಥೆ ಮುಖ್ಯಸ್ಥ ಡಾ೤ ಪ್ರಕಾಶ ಭಟ್ ಅಭಿಮತ.
ಯಾವ್ಯಾವ ಗಿಡಗಳು?: ಮಾವು, ಹುಣಸೆ, ಹಲಸು, ನೇರಳೆ, ನೆಲ್ಲಿ, ಬೇಲ, ಹೆಬ್ಬೇವು, ಬಿದಿರು, ಸೀಮೆತಂಗಡಿ, ಹುಲಗಲ, ಹಾಲವಾಣ, ಬಾಗೆ, ಸಿಮಾರುಬಾ ಹೀಗೆ ತರಹೇವಾರಿ ಜಾತಿಯ 28 ಸಾವಿರ ಗಿಡಗಳನ್ನು ಅರಣ್ಯ ಇಲಾಖೆ ಸಂಶೋಧನಾ ವಿಭಾಗದಿಂದ ಪಡೆದು ನೆಡಲಾಗುತ್ತಿದೆ. ಪ್ರತಿ ಎಕರೆಗೆ ಕನಿಷ್ಠ 300ರಿಂದ 400 ಗಿಡ ನಡೆಲಾಗುತ್ತಿದ್ದು, ರೈತರು ತಮ್ಮ ಇಷ್ಟದೇವತೆಗೆ ಪೂಜೆ ಸಲ್ಲಿಸಿ, ಕೈಗೆ ಕಂಕಣ ಕಟ್ಟಿ ಪ್ರತಿಜ್ಞೆ ಮಾಡಿ, ಅಗಿ ಹಬ್ಬ ಆಚರಿಸುತ್ತಾರೆ. ರೈತರೇ ಸಿದ್ಧಪಡಿಸಿದ ವಿಶೇಷ ಊಟವೂ ಇರುತ್ತದೆ. ಕಳೆದ ವರ್ಷ ಇಲ್ಲಿ ನೆಟ್ಟ 18 ಸಾವಿರ ಗಿಡಗಳನ್ನು ಈಗ ಎದೆಯೆತ್ತರ ಬೆಳೆದಿವೆ. 14 ವರ್ಷಗಳಲ್ಲಿ ಲಕ್ಷಗಟ್ಟಲೆ ಗಿಡಗಳನ್ನು ಬೆಳೆಸಿರುವುದು ತೃಪ್ತಿ ತಂತಿದೆ ಎಂದರು ಡಾ೤ ಭಟ್.
ಒಣ ಪ್ರತಿಷ್ಠೆಗಾಗಿ ಗಿಡ ನೆಡುವ ಜನರು ನಮ್ಮ ಮಧ್ಯದಲ್ಲಿದ್ದಾರೆ. ಆದರೆ, ಪರಿಸರ ಪ್ರೀತಿಯುಳ್ಳ ರೈತ ಸಮುದಾಯವೇ ಗಿಡ ನೆಡುವಂತೆ ಪ್ರೇರೇಪಿಸುತ್ತಿರುವ ಡಾ೤ ಪ್ರಕಾಶ್ ಭಟ್ ಅವರ ಕಾರ್ಯ ಶ್ಲಾಘನೀಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com