ಕನ್ನಡಪ್ರಭ ವಾರ್ತೆ, ಧಾರವಾಡ, ಜು. 21
ರಾಜ್ಯದ ಜನತೆ ರಕ್ಷಣೆ ಮಾಡದ ಗೃಹ ಸಚಿವ ಕೆ.ಜೆ. ಜಾರ್ಚ್ ಅವರಿಂದ ಕೂಡಲೇ ರಾಜಿನಾಮೆ ಪಡೆಯಬೇಕೆಂದು ಒತ್ತಾಯಿಸಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಗೃಹ ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಗೃಹ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸದ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ನಿರ್ಮಾಣವಾಗಿದ್ದರೂ ಮೌನವಾಗಿರುವ ಸಚಿವರು ಇದ್ದರೆಷ್ಟು ಬಿಟ್ಟರೆಷ್ಟು. ಈ ಕೂಡಲೇ ಅವರಿಂದ ರಾಜಿನಾಮೆ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಸಚಿವ ಕೆ.ಜೆ. ಜಾರ್ಜ್ ಅವರ ಅಸಮರ್ಥ ಕಾರ್ಯವೈಖರಿ ಹಾಗೂ ಅಧಿಕಾರಿಗಳ ಮೇಲೆ ಹಿಡಿತ ಇರದ ಕಾರಣ ರಾಜ್ಯದಲ್ಲಿ ಅಪರಾಧ ಹೆಚ್ಚಳಕ್ಕೆ ಕಾರಣ ಎಂಬುದು ಸ್ಪಷ್ಟ. ಸಚಿವರು ಪೋಲಿಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಸುರಕ್ಷಿತ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಎಡಿಜಿಪಿ ರವೀಂದ್ರನಾಥ ಪ್ರಕರಣದಲ್ಲಿ ಗೃಹ ಸಚಿವರು ನಡೆದುಕೊಂಡ ರೀತಿ ಇಲಾಖೆಯ ಮೇಲೆ ಇವರಿಗೆ ಹಿಡಿತ ತಪ್ಪಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಲಿಂಗರಾಜ ಪಾಟೀಲ, ಮಹೇಶ ಟೆಂಗಿನಕಾಯಿ, ವಿಜಯಾನಂದ ಶೆಟ್ಟಿ, ಪ್ರಕಾಶ ಗೋಡಬೊಲೆ, ಮುಗಳಿ ಶೆಟ್ಟರ, ವೀರೇಶ ಸಂಗಳದ, ವಿರೇಶ ಅಂಚಟಗೇರಿ, ಈರಣ್ಣ ಅಪಳಿ, ರಂಗಾಬದ್ಧಿ, ಬಸವರಾಜ ಬೆಣ್ಣಿ, ಬಸವರಾಜ ಮುತ್ತಳ್ಳಿ, ಉಪ ಮೇಯರ್ ಮಂಜುಳಾ ಅಕ್ಕೂರ, ಮಾಜಿ ಶಾಸಕಿ ಸೀಮಾ ಮಸೂತಿ, ಪೂರ್ಣಾ ಪಾಟೀಲ, ಅನಸೂಯಾ ಹಿರೇಮಠ, ಗೀತಾ ಪಾಟೀಲ, ಪುಷ್ಪಾ ನವಲಗುಂದ ಮತ್ತಿತರರು ಇದ್ದರು.