ಹುಬ್ಬಳ್ಳಿ: ಯೋಗ ಬೌದ್ಧಿಕ ಮಾತ್ರವಲ್ಲದೆ ಎಲ್ಲ ರೋಗಗಳನ್ನ್ನು ದೂರು ಮಾಡುವ ವಿದ್ಯೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಪ್ರಧಾನ ಸಂಚಾಲಕ ಆರ್.ಆರ್. ರಾಮಸ್ವಾಮಿ ಹೇಳಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಹುಬ್ಬಳ್ಳಿ ಶಾಖೆ ವತಿಯಿಂದ ಶನಿವಾರ ಸಂಜೆ ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಜನಜಾಗೃತಿ ಹಾಗೂ ಶೋಭಾಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುರಾತನ ಕಾಲದಲ್ಲಿ ಸಾಧು-ಸಂತರು ಸಮಾಜದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಯೋಗ ಉಪಯೋಗಿಸಿದ್ದರು. ಜಗತ್ತಿನಲ್ಲಿ ಕಂಡು ಬರುವ ಎಲ್ಲ ಸಮಸ್ಯೆಗಳಿಗೆ ಯೋಗದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ. ಯೋಗ ಸಾಧನೆಯಲ್ಲಿ ಎಚ್ಚರಿಕೆ ವಹಿಸುವುದು ಅಷ್ಟೇ ಮುಖ್ಯವಾಗಿದೆ ಎಂದರು.
ಯೋಗ ಸ್ಪರ್ಶ 2014ರ ಸ್ವಾಗತ ಸಮಿತಿ ಗೌರವಾಧ್ಯಕ್ಷ ಮಹೇಂದ್ರ ಠಕ್ಕರ್, ಪ್ರಕಾಶ ಬೆಂಡಿಗೇರಿ, ಕೇಂದ್ರ ಸಮಿತಿ ಅಧ್ಯಕ್ಷ ಸಿ.ವಿ. ಮಹಾದೇವಪ್ಪ, ಉಪಾಧ್ಯಕ್ಷ ವೀರಭದ್ರಪ್ಪ ಹಾಲಹರವಿ ಮತ್ತಿತರರು ಉಪಸ್ಥಿತರಿದ್ದರು.