ಧಾರವಾಡ: ದೇಶದಲ್ಲೇ ಪ್ರಥಮವಾಗಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿಯಿಂದ ಕಾರ್ಗಿಲ್ ಸ್ತೂಪ ಸ್ಥಾಪನೆಯಾಗಿದ್ದು, ಶನಿವಾರ 15ನೇ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಯುದ್ಧದಲ್ಲಿ ಮಡಿದ ಯೋಧರಿಗೆ ಇಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ಮುಖ್ಯಸ್ಥ ಕೃಷ್ಣಾ ಜೋಶಿ ಪ್ರಾಸ್ತಾವಿಕ ಮಾತನಾಡಿ, 1999ರ ಮೇ ತಿಂಗಳಿಂದ 76 ದಿನಗಳವರೆಗೆ ನಿಂತರವಾಗಿ ನಡೆದ ಯುದ್ಧದಲ್ಲಿ ದೇಶದ ಒಟ್ಟು 533 ಯೋಧರು ಭಾರತ ಮಾತೆಗಾಗಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ಈ ಪೈಕಿ ರಾಜ್ಯದ 13 ಯೋಧರು ವೀರ ಮರಣ ಅಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ 2002ರಲ್ಲಿ ದೇಶದಲ್ಲಿಯೇ ಮೊದಲ ಕಾರ್ಗಿಲ್ ಸ್ಥೂಪವನ್ನು ಧಾರವಾಡದಲ್ಲಿ ನಾವು ಸ್ಥಾಪಿಸಿ ಪ್ರತಿ ವರ್ಷ ಮಡಿದ ಯೋಧರ ನೆನಪು ಹಾಗೂ ಅವರ ಕುಟುಂಬದ ಸದಸ್ಯರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡುತ್ತಿದ್ದೇವೆ. ಕೇವಲ ಕಾರ್ಗಿಲ್ ಯುದ್ಧದಲ್ಲಿ ಮಡಿದವರಿಗೆ ಮಾತ್ರವಲ್ಲದೇ ಯುದ್ಧದಲ್ಲಿ ಮಡಿದ ಸೈನಿಕರನ್ನು ಇಲ್ಲಿ ಸ್ಮರಿಸುತ್ತೇವೆಂದು ಹೇಳಿದರು.
ಮೇಯರ್ ಶಿವು ಹಿರೇಮಠ, ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ಕುಮಾರ, ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ, ನಿವೃತ್ತ ಲೆ.ಕ. ಎಸ್.ಸಿ. ಸರದೇಶಪಾಂಡೆ, ಬ್ರಿಗೇಡಿಯರ್ ಎಸ್.ಜಿ. ಭಾಗವತ, ನಿವೃತ್ತ ಸೈನ್ಯಾಧಿಕಾರಿಗಳಾದ ಚಂದ್ರಶೇಖರ್ ಅಮೀನಗಡ, ಮೋಹನ ಮಠ ಕಾರ್ಗಿಲ್ ಸ್ತೂಪಕ್ಕೆ ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು.
ಸನ್ಮಾನ: ಕಾರ್ಗಿಲ್ ಯುದ್ಧದಲ್ಲಿ ಮಡಿದ ರಾಜ್ಯದ ಯೋಧರ ಕುಟುಂಬದ ಸದಸ್ಯರಾದ ಚೋಳಚಗುಡ್ಡದ ನಿರ್ಮಲಾ ಕುಲಕರ್ಣಿ, ಬೆಳಗಾವಿಯ ಲಕ್ಷ್ಮೀ ಮಸ್ಕೆ, ಬೈಲಹೊಂಗಲಿನ ಸಾವಿತ್ರಿ ಕೋಲಕಾರ, ಜಮಖಂಡಿಯ ಮಾಯಾದೇವಿ ಪೋತದಾರ ಹಾಗೂ ಕೊಪ್ಪಳದ ಸರೋಜಾ ಮೇಗಲಮಠ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಧಾರವಾಡದ ಹಲವು ಶಾಲೆ-ಕಾಲೇಜುಗಳ ಎನ್ಸಿಸಿ, ಸ್ಕೌಟ್ಸ್ ಮತ್ತು ಗೌಡ್ಸ್ ವಿದ್ಯಾರ್ಥಿಗಳು ಇದ್ದರು.