ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 27
ಚಿತ್ರರಂಗ ಸೇರಿದಂತೆ ಎಲ್ಲ ರೀತಿಯ ಕಲೆಗಳಲ್ಲಿ ಸ್ಥಳೀಯರಿಗೇ ಅವಕಾಶ ನೀಡುವಂತೆ ಕನ್ನಡಪರ ಸಂಘಟನೆಗಳು ಹೋರಾಡಬೇಕು. ಅಂದಾಗ ಮಾತ್ರ ಹಿನ್ನೆಲೆ ಗಾಯನದಲ್ಲೂ ಕನ್ನಡಿಗರಿಗೆ ಅವಕಾಶ ದೊರೆಯುತ್ತವೆ ಎಂದು ಖ್ಯಾತ ಹಿನ್ನಲೆ ಗಾಯಕ ರಾಜೇಶ್ಕೃಷ್ಣನ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಚಿತ್ರರಂಗದ 100 ವರ್ಷಗಳ ಆಚರಣೆಯ ಚಿತ್ರಗೀತೆಗಳ ಸ್ಪರ್ಧೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜೇಶ್, ಕನ್ನ್ನಡದ ಹಿನ್ನ್ನೆಲೆ ಗಾಯಕರಿಗೆ ಕನ್ನಡಿಗರಿಂದಲೇ ಅವಕಾಶ ಸಿಗುತ್ತಿಲ್ಲ. ಪರಭಾಷೆಯ ಅದರಲ್ಲಿಯೂ ಬಾಲಿವುಡ್ ಹಿನ್ನೆಲೆ ಗಾಯಕರಿಗೆ ಲಕ್ಷಾಂತರ ರು. ನೀಡಿ ಅವಕಾಶ ನೀಡುವ ಕನ್ನಡ ಚಿತ್ರರಂಗದವರು ಸ್ಥಳೀಯರನ್ನು ಪ್ರೋತ್ಸಾಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಕ್ಷಿಣ ಭಾರತದ ಹಿನ್ನೆಲೆ ಗಾಯಕರು ಸಣ್ಣ ತಪ್ಪೆಸೆಗಿದರೂ ಬಾಲಿವುಡ್ನಲ್ಲಿ ಅವರ ಬಗ್ಗೆ ತಾತ್ಸಾರ ಭಾವನೆ ತಾಳಲಾಗುತ್ತದೆ. ಹಿಂದಿ ಎಫ್ಎಮ್ಗಳಲ್ಲೂ ಉತ್ತರ ಭಾರತದ ಹಿನ್ನಲೆ ಗಾಯಕರ ಹಾಡುಗಳಿಗೇ ಪ್ರೋತ್ಸಾಹ ನೀಡಲಾಗುತ್ತದೆ ಎಂದರು. ಗಾಳಿಪಟ ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದು, ತಾವು ನಟಿಸಿದ ಮತ್ತೊಂದು ಚಿತ್ರ ಮೆಲೋಡಿ ಈ ತಿಂಗಳಲ್ಲೇ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಗಾಯನದಲ್ಲಿ ವ್ಯಸ್ತನಾಗಿದ್ದರಿಂದ ನಟನೆಯತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂದ ರಾಜೇಶ್, ಸಂಗೀತ ನಿರ್ದೇಶನ ಕಷ್ಟಕರ. ಸದ್ಯಕ್ಕೆ ಸಂಗೀತ ನಿರ್ದೇಶನ ಮಾಡುವ ವಿಚಾರ ಸದ್ಯಕ್ಕಿಲ್ಲ ಎಂದು ಹೇಳಿದರು.