ಕೇಂದ್ರ, ರಾಜ್ಯ ದ್ವಿಮುಖ ನೀತಿ

Updated on: 

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 29
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಳಗಾವಿ ಗಡಿ ಸಮಸ್ಯೆಯನ್ನು ಅಂತಿಮವಾಗಿ ಇತ್ಯರ್ಥಗೊಳಿಸಲು ಬದ್ಧತೆಯಿಂದ ಪ್ರಯತ್ನಿಸದೆ ಗಡಿಭಾಗದ ಜನತೆಯ ಭಾವನೆಗಳೊಂದಿಗೆ ಚೆಲ್ಲಾಟವಾಡುವ ದ್ವಿಮುಖ ನೀತಿ ಅನುಸರಿಸುತ್ತಿವೆ ಎಂದು ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಖೇದ ವ್ಯಕ್ತಪಡಿಸಿದೆ.
ಕ್ರಿಯಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಉಪಾಧ್ಯಕ್ಷರಾದ ಗುರುಲಿಂಗ ಕಾಪಸೆ, ಡಾ. ಗಿರಡ್ಡಿ ಗೋವಿಂದರಾಜ, ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ, ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಜಂಟಿಯಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಚ್ಛಾಶಕ್ತಿ ಕೊರತೆಯಿಂದಲೇ ಬೆಳಗಾವಿ ಜಿಲ್ಲೆಯ ಯಳ್ಳೂರ ಗ್ರಾಮದಲ್ಲಿ ಎರಡೂ ಭಾಷಿಕರ ಮಧ್ಯೆ ಗಲಾಟೆ ನಡೆಯಿತು ಎಂದು ಖೇದ ವ್ಯಕ್ತಪಡಿಸಿದರು.
ಬೆಳಗಾವಿ ಗಡಿಯಲ್ಲಿ ಪದೇ ಪದೇ ಈ ರೀತಿಯ ಭಾಷೆ ಕುರಿತಾಗಿ ಏಳುತ್ತಿರುವ ಕಿತ್ತಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾರಣ ಎಂದು ದೂರಿದರು.
ಮಹಾಜನ ವರದಿಯ ತೀರ್ಮಾನಗಳನ್ನು ಅಂತಿಮ ಎಂದೇ ಪರಿಗಣಿಸಬೇಕೆಂಬ ತಿಳಿವಳಿಕೆಯನ್ನು ತಾಳಿದ್ದರೂ ಮಹಾರಾಷ್ಟ್ರ ರಾಜ್ಯದ ತಗಾದೆ ಹಾಗೆಯೇ ಉಳಿದಿದೆ. ಕೇಂದ್ರ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ವರದಿ ಜಾರಿಯಾಗಿಲ್ಲ. ಭಾಷಾವಾರು ರಾಜ್ಯಗಳ ಗಡಿ ಗೊತ್ತುಪಡಿಸುವಿಕೆ ಹಾಗೂ ಅಂತರ್ ರಾಜ್ಯಗಳ ನೀರಿನ ಹಂಚಿಕೆ ವಿಷಯಗಳಲ್ಲಿ ಭಾರತದಲ್ಲಿ ಭೇದಗಳಿರುವುದು ಸಹಜವಾದರೂ ಸಂವಿಧಾನಾತ್ಮಕವಾಗಿ ಅವುಗಳನ್ನು ಬಗೆಹರಿಸಿಕೊಂಡು ರಾಜ್ಯಗಳು ಪರಸ್ಪರ ಒಪ್ಪಿಗೆಯಿಂದ ಮುನ್ನಡೆಯುವುದು ಮಹತ್ವದ ಕ್ರಿಯೆ ಎಂದರು.
ನ್ಯಾಯಾಂಗ ನೀಡಿದ ತೀರ್ಪಿಗೆ ವಿರುದ್ಧವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಉದ್ಧಟತನ ಹಾಗೂ ಗೂಂಡಾಗಿರಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? 30 ವರ್ಷಗಳ ವರೆಗೆ ಆ ನಾಮಫಲಕವನ್ನು ಇಟ್ಟುಕೊಂಡಿದ್ದು ರಾಜ್ಯ ಸರ್ಕಾರದ ತಪ್ಪು. ಕನ್ನಡಿಗರು ಸಹನಶೀಲರು. ಕನ್ನಡ ನಾಡಿನಲ್ಲಿ ಯಾರೇ ದಬ್ಬಾಳಿಕೆ ಮಾಡಿದರೂ ನಾವ್ಯಾರೂ ಸಹನಶೀಲತೆ ಕಳೆದುಕೊಳ್ಳಬಾರದು ಎಂದು ಹೇಳಿಕೊಂಡು ಬರುತ್ತಿದ್ದೇವೆ. ಕನ್ನಡಿಗರು ಪ್ರತಿಭಟಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ. ನಮ್ಮ ಅಸ್ಮಿತೆ ಉಳಿಸಿಕೊಳ್ಳಬೇಕಿದೆ ಎಂದರು.
ಮತ ರಾಜಕೀಯದ ಫಲವಾಗಿ ಬೆಳಗಾವಿ ಗಡಿಯ ನಮ್ಮ ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರು ಬಾಯಿ ತಪ್ಪಾದರೂ ಹೇಳಿಕೆ ನೀಡುತ್ತಿಲ್ಲ. ಕನ್ನಡಿಗ ಹಾಗೂ ಮರಾಠಿ ಭಾಷಿಕರು ಸೌಹಾರ್ದದಿಂದಲೇ ಇದ್ದಾರೆ. ಆದರೆ, ರಾಜಕೀಯ ಸಂಘಟನೆಗಳೇ ಭಾಷೆ-ಭಾಷೆ ಮಧ್ಯೆ ಕಲಹ ತಂದಿಡುತ್ತಿವೆ. ದೇಶಕ್ಕೆ ಕಂಟಕವಾಗಿರುವ ಎಂಇಎಸ್ ಸಂಘಟನೆಯನ್ನು ಕೂಡಲೇ ರದ್ದುಗೊಳಿಸಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ಪರಮಾಧಿಕಾರ ಬಳಸಿ ಗಡಿ ತಂಟೆಗಳನ್ನು ಏಳದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎರಡೂ ರಾಜ್ಯಗಳ ಅಭಿವೃದ್ಧಿಗೆ ಇಂತಹ ಗಲಾಟೆಗಳು ಕಾರಣವಾಗುತ್ತವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com