ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 5
ಪ್ರಸ್ತುತ ದಿನಗಳಲ್ಲಿ ಕೇವಲ ಚುನಾವಣಾ ತಂತ್ರದ ಅಭಿವೃದ್ಧಿಯಾಗುತ್ತಿದೆಯೇ ಹೊರತು ಜೀವ ಸಂಕುಲದ್ದಲ್ಲ ಎಂದು ಪರಿಸರವಾದಿ ಸುರೇಶ ಹೆಬ್ಳೀಕರ ವಿಷಾದಿಸಿದರು.
ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಸಾರಿಗೆ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯೆಂದರೆ ಕೇವಲ ಡಾಂಬರ್, ಸಿಮೆಂಟ್ ರಸ್ತೆ, ದೊಡ್ಡ ದೊಡ್ಡ ಕಾರ್ಖಾನೆ, ಆಳೆತ್ತರದ ಕಟ್ಟಡಗಳು, ಕೋಟಿಗಟ್ಟಲೆ ಬೆಲೆಬಾಳುವ ಕಾರು-ಮೋಟಾರುಗಳ ಸೃಷ್ಟಿಯಲ್ಲ, ಬದಲಾಗಿ ಜೀವ ವೈವಿಧ್ಯವನ್ನು ಕಂಗೊಳಿಸುವಂತೆ ನೋಡಿಕೊಂಡು, ಜೀವರಾಶಿಗಳು ಆರೋಗ್ಯ ಪೂರಿತವಾಗಿ ಬದುಕುವಂತಾಗಬೇಕು. ಜೀವ ವೈವಿಧ್ಯ ಉಳಿಸುವುದೇ ನಮ್ಮ ಅಭಿವೃದ್ಧಿ ಮಂತ್ರವಾಗಬೇಕು ಎಂದರು ಪ್ರತಿಪಾದಿಸಿದರು.
ದುರಂತವೇ ಸರಿ: ಭಾರತದಲ್ಲಿ ಸಾವಿರಾರು ಬಗೆಯ ಸಸ್ಯ ವೈವಿಧ್ಯ ಇದೆ. ಇದು ಬೇರೆಲ್ಲೂ ಸಿಗುವುದಿಲ್ಲ. ಇದು ಗೊತ್ತಿಲ್ಲದೆ ನಾವು ಅವುಗಳನ್ನೆಲ್ಲ ಬರಡು ಮಾಡಿ, ಕೈಗಾರೀಕರಣಕ್ಕೆ ತಲೆಬಾಗುತ್ತಿದ್ದೇವೆ. ಕೈಗಾರೀಕರಣವನ್ನೂ ಇಂದು ರಾಜಕೀಯ ನಾಯಕರು ಅಭಿವೃದ್ಧಿಯ ಅಸ್ತ್ರವಾಗಿ ಝಳಪಿಸುತ್ತಿರುವುದು ಭವಿಷ್ಯದ ದೃಷ್ಟಿಯಿಂದ ದುರಂತವೇ ಸರಿ. ಪೂರ್ವ ಹಿಮಾಲಯ ಹಾಗೂ ಪಶ್ಚಿಮ ಘಟ್ಟ ನಮ್ಮ ದೇಶದ ಮಹಾನ್ ಸಂಪತ್ತು. ರಾಜಕೀಯ ಇಚ್ಛಾಶಕ್ತಿ ಮೊದಲು ಇವುಗಳಿಗೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಳ್ಳಲಿ. ಸರ್ಕಾರಗಳು ಯಾವುದೇ ಅಭಿವೃದ್ಧಿಯ ನೀಲನಕ್ಷೆ ರೂಪಿಸುವ ಪೂರ್ವದಲ್ಲಿ ಒಂದು ಬಾರಿಯಾದರೂ ಸಸ್ಯ ಸಂಕುಲದ, ಆರೋಗ್ಯ ಪೂರಿತ ಪರಿಸರದ ಬಗ್ಗೆ ತುಸು ಯೋಚಿಸಲಿ. ಸರ್ಕಾರಗಳಿಗೆ ಸರಿಯಾದ ವಿವೇಚನೆ ಇಲ್ಲದ್ದರಿಂದ ಇಂದು ರಾಜ್ಯದಲ್ಲಿ ಬಳಸುವ ಒಟ್ಟು ವಿದ್ಯುತ್ ಶಕ್ತಿಯಲ್ಲಿ ಶೇ. 40 ವಿದ್ಯುತ್ ಬೆಂಗಳೂರಿನಲ್ಲಿ ಎಸಿಗಾಗಿ ಬಳಕೆಯಾಗುತ್ತಿದೆ ಎಂದರು.
ಕೃಷಿ ವಿಜ್ಞಾನಿ ಎಸ್.ಎ. ಪಾಟೀಲ ಮಾತನಾಡಿ, ಜನಸಂಖ್ಯಾ ಸ್ಫೋಟ ಹಾಗೂ ರಾಸಾಯನಿಕ ಬಳಕೆಯೇ ಪರಿಸರ ನಾಶಕ್ಕೆ ಪ್ರಮುಖ ಕಾರಣ ಎಂದರು.
ಪರಿಸರ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಧಾರವಾಡ ಸಾರಿಗೆ ಇಲಾಖೆ ಅಪರ ಆಯುಕ್ತ ಸಿ.ಆರ್. ಮೊಹಮ್ಮದ್ ಸುಲೇಮಾನ್, ಬೆಳಗಾವಿ ಸಾರಿಗೆ ಇಲಾಖೆ ಉಪ ಆಯುಕ್ತ ಬಿ.ಪಿ. ಉಮಾಶಂಕರ್, ಎ.ವಿ.ಎಲ್. ಇಂಡಿಯಾ ಕಂಪನಿಯ ಪ್ರಾದೇಶಿಕ ಮುಖ್ಯಸ್ಥ ಎಂ.ಎನ್. ಶೇಷಾದ್ರಿ, ವೈದ್ಯ ಗಿರಿಧರ ಕುಕನೂರ ಇದ್ದರು. ಜ್ಯೂಬಿಲಿ ವೃತ್ತದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಭಿತ್ತಿ ಪತ್ರಗಳೊಂದಿಗೆ ಬೈಕ್ ರ್ಯಾಲಿಗೆ ಸುರೇಶ ಹೆಬ್ಳೀಕರ ಚಾಲನೆ ನೀಡಿದರು.