ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 5
ಶತಮಾನ ಕಂಡ, ಐತಿಹಾಸಿಕ ಹಿನ್ನೆಲೆಯುಳ್ಳ ಹಾಗೂ ಸರ್ ಎಂ. ವಿಶ್ವೇಶ್ವರಾಯನವರಿಂದ ನಿರ್ಮಿತ ಇಲ್ಲಿನ ಕೆಲಗೇರಿ ಕೆರೆಗೆ ಈಗ ಮಾಲಿನ್ಯದ ಭೀತಿ ಎದುರಾಗಿದೆ.
ಸುತ್ತಲಿನ ಹತ್ತಾರು ಪ್ರದೇಶಗಳ ರಾಜ ಕಾಲುವೆಗಳಿಂದ ನದಿ ರೂಪದಲ್ಲಿ ಹರಿದು ಬರುವ ಚರಂಡಿ ಹಾಗೂ ಒಳಚರಂಡಿ ನೀರು ಐತಿಹಾಸಿಕ ಕೆಲಗೇರಿ ಕೆರೆಯ ನೀರನ್ನು ಅಶುದ್ಧಗೊಳಿಸುತ್ತಿದ್ದು, ಕೆರೆ ಬಳಕೆದಾರರಿಗೆ ಹಾಗೂ ಪರಿಸರ ಪ್ರೇಮಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅನೇಕ ವರ್ಷಗಳ ಹೋರಾಟದ ಫಲವಾಗಿ ಈ ಹಿಂದಿನ ಜಿಲ್ಲಾಧಿಕಾರಿ ದರ್ಪಣ ಜೈನ್ ರು. 5 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಚಿಂತನೆ ನಡೆಸಿದ್ದರು. ಸುಮಾರು ರು. 2 ಕೋಟಿ ವೆಚ್ಚದಲ್ಲಿ ಕೆಲ ಸುಧಾರಣೆ ಮಾಡಲಾಗಿದೆ. ನಿರ್ವಹಣೆ ಇಲ್ಲದ ಕಾರಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.
ಕೊಳಚೆ ನೀರು ಕೆರೆಗೆ ಸೇರದಂತೆ ಕೆರೆ ಬದಿಗೆ ಗಟಾರು ನಿರ್ಮಿಸಿ ಈ ಮೂಲಕ ಕೆರೆಗೆ ಕೊಳಚೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಕೊಳಚೆ ನೀರು ಹರಿದು ಹೋಗುವ ಗಟಾರು ಸದ್ಯ ಮಣ್ಣು, ಕಲ್ಲು, ಕಸದಿಂದ ತುಂಬಿಕೊಂಡಿದ್ದು, ಕೊಳಚೆ ನೀರು ಮತ್ತೆ ಕೆರೆಗೆ ಸೇರುತ್ತಿದೆ. ಹೀಗಾಗಿ, ಕೆರೆ ನೀರು ಇತ್ತೀಚೆಗೆ ತೀರಾ ಕಲ್ಮಶವಾಗಿದ್ದು, ಇದು ಅಲ್ಲಿನ ಮೀನು ಹಾಗೂ ಜಲಚರಗಳಿಗೂ ಕಂಟಕವಾಗಿ ಪರಿಣಮಿಸಿದೆ. ಹತ್ತಾರು ವರ್ಷಗಳಿಂದ ಕೆರೆಯಲ್ಲಿ ಸ್ನಾನ ಮಾಡುವ, ಬಟ್ಟೆ ತೊಳೆಯುವ ಸ್ಥಳೀಯರಿಗೆ ಅನೇಕ ಚರ್ಮ ವ್ಯಾಧಿಗಳು ಅಂಟಿಕೊಳ್ಳುತ್ತಿವೆ.
ಶ್ರೀನಗರ, ಸಪ್ತಾಪುರ, ಚನ್ನಬಸವೇಶ್ವರ ನಗರ, ಗೋಪಳಾಪುರ, ಕೇಶವನಗರ, ಸದಾಶಿವ ನಗರ, ಶಿವಗಿರಿ, ಜಯನಗರ, ರಾಣಿಚನ್ನಮ್ಮ ನಗರ, ಭಾರತಿನಗರ, ವಿನಾಯಕನಗರ, ಮಹಾಂತ ನಗರಗಳಿಂದ ಚರಂಡಿ ನೀರು ಈ ಕೆರೆಗೆ ಶೇಖರಣೆಯಾಗುತ್ತಿದೆ.
ಏನಾಗಿದೆ ಉದ್ಯಾನ?: ಗುಡ್ಡದಂತಿದ್ದ ಕೆರೆ ಸುತ್ತಲಿನ ಪ್ರದೇಶವನ್ನು ನಿರ್ಮಿತಿ ಕೇಂದ್ರ ಸರ್ಕಾರದ ರು. 1.60 ಕೋಟಿ ವೆಚ್ಚದಲ್ಲಿ ಸುಂದರ ಉದ್ಯಾನ ನಿರ್ಮಿಸಿ ಜಿಲ್ಲಾಡಳಿತಕ್ಕೆ ಒಪ್ಪಿಸಿತ್ತು. ಜಿಲ್ಲಾಡಳಿತ ಉದ್ಯಾನ ನಿರ್ವಹಣೆಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅದು ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. 1911ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಈ ಕೆರೆ ನಿರ್ಮಿಸಿದ್ದರೆಂದು ಅವರ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರವೇ ನಿರ್ಧಾರ ಕೈಗೊಂಡು ಮೂರ್ತಿಯನ್ನೂ ತರಿಸಿದೆ. ಪ್ರತಿಷ್ಠಾಪನೆಯ ಕಾಮಗಾರಿ ಮುಗಿದಿಲ್ಲ. ವಾಯು ವಿಹಾರಕ್ಕೆ ನಿರ್ಮಿಸಿದ ವಾಕಿಂಗ್ ಪಾತ್ ಮೇಲೆ ಹುಲ್ಲು ಬೆಳೆದು ನಿಂತಿದೆ. ಶೌಚಾಲಯದ ಬಾಗಿಲುಗಳು ಮುರಿದಿದ್ದು, ಶೌಚ ಸ್ಥಳದಲ್ಲಿ ಕಲ್ಲು, ಇಟ್ಟಿಗೆ ತುಂಡುಗಳ ರಾಶಿ ಇದೆ.
ಪ್ರೇಮಿಗಳು ಹಾಜರ್: ಕೆರೆಗೆ ಸರಿಯಾದ ರಕ್ಷಣೆ ಇಲ್ಲದ್ದರಿಂದ ವಿಶಾಲವಾದ ಆವರಣದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಸಂಜೆಯಾದರೆ ಸಾಕು, ಪ್ರೇಮಿಗಳು ಇಲ್ಲಿ ಹಾಜರ್. ವಾಕಿಂಗ್ಪಾತ್ನ ದೀಪಗಳನ್ನೂ ಕಳ್ಳರು ಬಿಟ್ಟಿಲ್ಲ. ಈ ಸಮಸ್ಯೆಗಳ ಕುರಿತು ಸಾರ್ವಜನಿಕರು ಯಾರಿಗೆ ಪ್ರಶ್ನಿಸಬೇಕೆಂಬ ಗೊಂದಲವೂ ಇದೆ. ಕೃಷಿ ವಿಶ್ವವಿದ್ಯಾಲಯದ ಒಡೆತನದಲ್ಲಿ ಈ ಕೆರೆ ಇದ್ದು, ಪಾಲಿಕೆ, ಸಣ್ಣ ನೀರಾವರಿ ಇಲಾಖೆಗೂ ಸಂಬಂಧಿಸಿದೆ.
ಇದೀಗ ಧಾರವಾಡದಿಂದ ವರ್ಗಾವಣೆಆಗಿರುವ ಜಿಲ್ಲಾಧಿಕಾರಿ ಸಮೀರ ಶುಕ್ಲ ಅವರಿಗೆ ಹಲವು ಬಾರಿ ಮನವಿ ನೀಡಿದರೂ ಅವರು ಒಮ್ಮೆಯೂ ಕೆರೆಯತ್ತ ಬಂದಿಲ್ಲ. ಕೆರೆಯ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ನೂತನ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಅವರಾದರೂ ಕೆರೆ ಅಭಿವೃದ್ಧಿಗೆ ಗಮನ ಹರಿಸುತ್ತಾರೆಯೇ ನೋಡಬೇಕಿದೆ ಎನ್ನುತ್ತಾರೆ ಪರಿಸರವಾದಿಗಳು.
ಸೌಂದರ್ಯ ಹಾಳು...
ಚರಂಡಿ ನೀರು ಕೆರೆಯ ಸೌಂದರ್ಯವನ್ನೇ ಹಾಳು ಮಾಡುತ್ತಿದೆ. ಈ ಮುಂಚೆ ಕೆರೆ ಹರಿದು ಬರುತ್ತಿದ್ದು ಶುದ್ಧ ನೀರಿನ ಮೂಲಗಳು ಬಂದ್ ಆಗಿವೆ. ಕಸ, ಕಡ್ಡಿ ಹಾಗೂ ಪ್ರದೇಶಗಳ ಹೊಲಸು ನಿತ್ಯ ಕೆರೆ ಸೇರುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ತಿ ಕೆರೆ ಕೊಳಚೆ ನೀರಿನ ಸಂಗ್ರಹವಾಗಲಿದೆ. ಈ ನಿಟ್ಟಿನಲ್ಲಿ ಕೂಡಲೇ ಕೊಳಚೆ ನೀರು ಬಂದ್ ಮಾಡಲು ಕ್ರಮ ತೆಗೆದುಕೊಳ್ಳಬೇಕು.
- ಶಂಕರ ಕುಂಬಿ (ಪರಿಸರವಾದಿ)
ರೋಗಗಳ ತಾಣ
ಕೆರೆ ಬದಿಯೇ ಮನೆ ಇದ್ದು, ಕೊಳಚೆ ನೀರು ಕೆರೆ ಹತ್ತಿರವೇ ಬ್ಲಾಕ್ ಆಗಿದ್ದರಿಂದ ಸುತ್ತಮುತ್ತಲಿನ ಮನೆಗಳಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಹಾವುಗಳಂತೂ ಮನೆಯೊಳಗೆ ಹರಿದಾಡುತ್ತವೆ. ಈ ಕೆರೆ ದಂಡೆ ಅನೇಕ ರೋಗಗಳ ತಾಣವಾಗಿದೆ. ದೂರುಗಳನ್ನು ನೀಡಿ ಬೇಸತ್ತು ಪ್ರತಿಭಟನೆಗೆ ಸಜ್ಜಾಗಿದ್ದೇವೆ.
- ಎನ್.ಆರ್. ಸೊರಬ, ಸ್ಥಳೀಯರು
ಬಸವರಾಜ ಹಿರೇಮಠ