ಮೌನ ಮುರಿವರೇ ಜನಪ್ರತಿನಿಧಿಗಳು?

Updated on: 

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 10
ಕೆರೆಗಳ ರಕ್ಷಣೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಜವಾಬ್ದಾರಿ ತೋರಬೇಕಿದೆ. ಜನಪ್ರತಿನಿಧಿಗಳು ಸಹ ಇದುವರೆಗಿನ ಮೌನ ಮುರಿದು ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕಿದೆ.
ಈಗಾಗಲೇ ಅವಳಿ ನಗರದಲ್ಲಿನ ಬಹುತೇಕ ಕೆರೆಗಳು ಬತ್ತಿಹೋಗಿದ್ದು, ಆ ಜಾಗದಲ್ಲಿ ಕಾಂಕ್ರಿಟ್ ಕಟ್ಟಡಗಳು ತಲೆ ಎತ್ತಿವೆ. ಇದರೊಂದಿಗೆ ಅಂತರ್ಜಲ ಮಟ್ಟವೂ ಕುಸಿಯತೊಡಗಿದೆ. ದಾಖಲೆಗಳಲ್ಲಿ ಮಾತ್ರ ಕೆರೆ ಸ್ವಚ್ಛತೆ ಕಾಣುತ್ತಿದ್ದು, ವಾಸ್ತವಿಕವಾಗಿ ಕೆರೆಗಳು ಮುಚ್ಚಿ ಹೋಗುವ ದುಸ್ಥಿತಿಯಲ್ಲಿವೆ. ಹೂಳು ತುಂಬಿ ಗಬ್ಬೆದ್ದು ನಾರುವ ಅವಳಿ ನಗರದ ಅನೇಕ ಕೆರೆಗಳ ಎದುರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿತ್ಯ ಸುತ್ತಾಡುತ್ತಿದ್ದರೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ವಿಪರ್ಯಾಸ.
ನಾಡು-ನುಡಿ ರಕ್ಷಣೆಗಾಗಿ ಹೋರಾಡುವ ಸಂಘಟನೆಗಳು ಸಹ ಕೆರೆಗಳ ರಕ್ಷಣೆಗೆ ಕೂಗೆತ್ತದಿರುವುದು ದುರ್ದೈವದ ಸಂಗತಿ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಇನ್ನೂ ಕೆಲವೇ ವರ್ಷಗಳಲ್ಲಿ ಅವಳಿ ನಗರದ ಕೆರೆಗಳು ಬತ್ತಿ ಹೋಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಇರುವ ಕೆರೆಗಳನ್ನು ರಕ್ಷಿಸಿಕೊಳ್ಳಲು ಮುಂದಾಗದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗಳ ಆಡಳಿತ ವೈಖರಿ ಜನರ ಅಸಮಾಧಾನಕ್ಕೆ ತುತ್ತಾಗಿದೆ. 'ಕೆರೆ ಕಣ್ಣೀರ ಕಥೆ' ಕುರಿತು 'ಕನ್ನಡಪ್ರಭ' ಸರಣಿ ವಿಶೇಷ ವರದಿಗಳನ್ನು ಪ್ರಕಟಿಸುವ ಮೂಲಕ ಅವಳಿ ನಗರದ ವಿವಿಧ ಕೆರೆಗಳ ಸ್ಥಿತಿಗತಿಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ಣೆದುರು ತೆರೆದಿಟ್ಟಿದೆ. ಪಾಲಿಕೆ ವ್ಯಾಪ್ತಿಯ ಇನ್ನೂ ಅನೇಕ ಕೆರೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಇನ್ನೂ ಜಿಲ್ಲಾ ವ್ಯಾಪ್ತಿಯಲ್ಲಿ ನೂರಾರು ಕೆರೆಗಳಿದ್ದು, ಅವುಗಳ ಸ್ಥಿತಿಯೂ ಹೀಗೆಯೇ ಇದೆ.
ಕೆರೆಗಳ ರಕ್ಷಣೆಗೆ 'ಕನ್ನಡಪ್ರಭ' ತೋರಿದ ಕಾಳಜಿಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ತೋರಬೇಕಿದೆ. ಇದಕ್ಕಾಗಿ ಸಂಘ-ಸಂಸ್ಥೆಗಳು ಬೀದಿಗಿಳಿದು ಹೋರಾಟ ಮಾಡಬೇಕಿದೆ. ಆ ಮೂಲಕ ಆಡಳಿತದ ಮೇಲೆ ಒತ್ತಡ ಹೇರುವ ತಂತ್ರವನ್ನು ಸಾರ್ವಜನಿಕರು ಸಂಘ-ಸಂಸ್ಥೆಗಳ ಮೂಲಕ ಮಾಡಬೇಕಿದೆ. ಆಡಳಿತ ವರ್ಗ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತು, ಕೆರೆಗಳ ರಕ್ಷಣೆಗೆ ಮುಂದಾಗುವುದೇ ?
ಕೆರೆ ಅಭಿವೃದ್ಧಿಗೆ ಬದ್ಧ..
ಧಾರವಾಡ ವ್ಯಾಪ್ತಿಯ ಹಲವು ಕೆರೆಗಳ ಸ್ಥಿತಿ ಸರಿಯಿಲ್ಲ ಎಂಬುದು ಅರಿವಿಗೆ ಬಂದಿದೆ. ಈಗಾಗಲೇ ಕೆಲಗೇರಿ ಹಾಗೂ ಸಾಧನಕೇರಿ ಕೆರೆಗಳ ಅಭಿವೃದ್ಧಿಯಾಗಿದ್ದು, ಪೂರ್ಣ ಪ್ರಮಾಣದಲ್ಲಾಗಬೇಕಿದೆ. ಕೆಲಗೇರಿ ಕೆರೆಗೆ ವಿವಿಧ ಅನುದಾನಗಳಲ್ಲಿ ರು. 250 ಕೋಟಿ ಹೆಚ್ಚುವರಿ ಹಣ ತಂದು ಕೊಳಚೆ ನೀರು ಹರಿದು ಹೋಗಲು ಗಟಾರು ನಿರ್ಮಿಸಿದ್ದು, ಇನ್ನಷ್ಟು ಸುಧಾರಿಸಬೇಕಿದೆ. ಕೋಳಿಕೆರೆ ಅಭಿವೃದ್ಧಿಗೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ರು. 11.50 ಕೋಟಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆದರೆ ಆ ಯೋಜನೆ ಜಾರಿಯಾಗಲಿಲ್ಲ. ಇದೀಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಕೆರೆ ಅಭಿವೃದ್ಧಿ ಯೋಜನೆ ಅಡಿ ಈ ಕೆರೆಯನ್ನು ಶುದ್ಧಗೊಳಿಸುವ ಕಾರ್ಯವನ್ನು ಆರು ತಿಂಗಳೊಳಗೆ ಕೈಗೆತ್ತಿಕೊಳ್ಳಲಾಗುವುದು.
- ಅರವಿಂದ ಬೆಲ್ಲದ, ಶಾಸಕರು
ಕೆರೆಗಳಿಗೆ ಭೇಟಿ ನೀಡಿದ್ದೇನೆ...
'ಕನ್ನಡಪ್ರಭ'ದಲ್ಲಿ ಪ್ರಕಟಗೊ ಕೆರೆ ಕಣ್ಣೀರ ಕಥೆ ಸರಣಿ ಲೇಖನಗಳನ್ನು ಗಮನಿಸಿದ್ದೇನೆ. ಕೆರೆಗಳು ಪರಿಸರದ ಸಂಕೇತವಾಗಿದ್ದು, ಅವುಗಳನ್ನು ಉಳಿಸಬೇಕಿರುವುದು ಸಮಾಜದ ಕರ್ತವ್ಯ. ಅವಳಿ ನಗರದ ಕೆರೆಗಳ ಅಭಿವೃದ್ಧಿಗೆ ಪಾಲಿಕೆ ಬದ್ಧವಾಗಿದೆ. ಪತ್ರಿಕೆಯಲ್ಲಿನ ಲೇಖನಗಳನ್ನು ಓದಿ ಹುಬ್ಬಳ್ಳಿಯ ತೋಳನಕೆರೆ ಹಾಗೂ ಧಾರವಾಡದ ಸಾಧನಕೇರಿ ಕೆರೆಗಳಿಗೆ ಸ್ವತ: ಭೇಟಿ ನೀಡಿ ಪರಿಶೀಲಿಸಲಾಗಿದೆ. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೊಂದಿಗೆ ಚರ್ಚಿಸಿ ಉಳಿದ ಕೆರೆಗಳಿಗೆ ಭೇಟಿ ಮಾಡಿ ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಲಾಗುವುದು. ಸಣ್ಣ ಪುಟ್ಟ ಸಮಸ್ಯೆ ಹೊಂದಿರುವ ಕೆರೆಗಳ ಸುಧಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳುತ್ತೇವೆ. ಪಾಲಿಕೆಯ ಒಳಚರಂಡಿ ವ್ಯವಸ್ಥೆ ಸುಧಾರಿಸುವವರೆಗೂ ಕೆರೆಗಳಿಗೆ ಕೊಳಚೆ ನೀರು ಸೇರುವ ಸಮಸ್ಯೆಗೆ ಪರಿಹಾರ ಕಷ್ಟ. ಆದರೂ ಬೇರೆ ಮಾರ್ಗ ರಚಿಸುವ ಮೂಲಕ ಕೊಳಚೆ ನೀರು ಕೆರೆಗೆ ಸೇರದಂತೆ ಯೋಜನೆ ರೂಪಿಸಲಾಗುವುದು.
- ಶಿವು ಹಿರೇಮಠ, ಮೇಯರ್
ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿನ ಕೆರೆಗಳ ರಕ್ಷಣೆಗೆ ರು. 5 ಕೋಟಿ ಮಂಜೂರು ಮಾಡಲಾಗಿತ್ತು. ಕೆರೆಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಿನ ಸರ್ಕಾರದ ಮೇಲೂ ಒತ್ತಡ ಹೇರಲಾಗುವುದು. ಉಣಕಲ್ಲ ಕೆರೆ, ತೋಳನಕೆರೆ ಸೇರಿದಂತೆ ಇತರ ಎಲ್ಲ ಕೆರೆಗಳ ಪುನರುಜ್ಜೀವನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕೆರೆಗಳ ಉಳಿವಿಗೆ ಹೂಳು ಎತ್ತುವ ಕೆಲಸ ಮೊದಲು ನಡೆಯಬೇಕಿದೆ.
- ಜಗದೀಶ ಶೆಟ್ಟರ್,  ಮಾಜಿ ಮುಖ್ಯಮಂತ್ರಿ
ಕೆಂಪಗೇರಿ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕೆರೆಗಳಲ್ಲಿನ ಹೂಳೆತ್ತಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆಗಳು ವಹಿಸಿಕೊಂಡಿವೆ. ಕೆರೆಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಕೆರೆಗಳ ರಕ್ಷಣೆಗೆ ಬದ್ಧ. ಕೆರೆಗಳ ರಕ್ಷಣೆಗೆ ಸಂಬಂಧಿಸಿದಂತೆ ಶೀಘ್ರ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ತುರ್ತು ಕ್ರಮ ಕೈಗೊಂಡು ಕೆರೆಗಳಲ್ಲಿನ ಹೂಳು ತೆಗೆಯುವುದು ಮತ್ತಿತರ ಸೌಲಭ್ಯ ಒದಗಿಸಲಾಗುವುದು.
- ಪ್ರಸಾದ ಅಬ್ಬಯ್ಯ, ಶಾಸಕರು
ಅವಳಿ ನಗರದ ಎಲ್ಲ ಕೆರೆಗಳು ಆಡಳಿತ ವರ್ಗದ ನಿರ್ಲಕ್ಷ್ಯದಿಂದ ಕೊಳಚೆ ಗುಂಡಿಗಳಂತಾಗಿದ್ದು, ಇನ್ನಾದರೂ ಅವುಗಳ ರಕ್ಷಣೆಗೆ ಸಮಾಜ ಮುಂದಾಗಬೇಕು. ವ್ಯವಸ್ಥೆಯ ವೈಫಲ್ಯದಿಂದ ಕೆರೆಗಳು ನಾಶವಾಗುತ್ತಿದ್ದು, ಕೆರೆ ಏತಕ್ಕೆ ಅವಶ್ಯ, ಅವುಗಳಿಂದ ಸಮಾಜಕ್ಕೆ ಏನು ಲಾಭ ಎಂಬುದರ ಬಗ್ಗೆ ಜನರಿಗೆ ತಿಳಿವಳಿಕೆ ಅಗತ್ಯ. ಪ್ರತಿ ಕೆರೆಗೆ ಇರುವ ಜಲಾನಯನ ಪ್ರದೇಶದಲ್ಲಿ ಗಿಡ-ಮರ ಬೆಳೆಸಿ ಮಣ್ಣು ಕೊಚ್ಚಿಕೊಂಡು ಕೆರೆಗೆ ಹೋಗದಂತೆ ತಡೆದು ಹೂಳಾಗುವುದನ್ನು ತಪ್ಪಿಸಬೇಕು. ಪ್ಲಾಸ್ಟಿಕ್ ಕಸ ಕೆರೆಗೆ ಹೋಗದಂತೆ ತಡೆಯಬೇಕು. ಕೆರೆ ಒತ್ತುವರಿ ನಿಲ್ಲಿಸಬೇಕು. ಕೊಳಚೆ ನೀರು ಕೆರೆಗೆ ಸೇರದಂತೆ ಯೋಜನೆ ನಿರ್ಮಿಸಬೇಕು.
- ಡಾ. ಸಂಜೀವ ಕುಲಕರ್ಣಿ, ಪರಿಸರವಾದಿ, ಧಾರವಾಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com