ಕನ್ನಡಪ್ರಭ ವಾರ್ತೆ, ಅಳ್ನಾವರ, ಜೂ. 11
ಅಳ್ನಾವರ ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆ ಬುಧವಾರ ಪಪಂ ಕಾರ್ಯಾಲಯದಲ್ಲಿ ಜರುಗಿತು. ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆಗಳು, ಅನುಷ್ಠಾನಗೊಂಡು ಪ್ರಗತಿಯಲ್ಲಿರುವ ಕಾಮಗಾರಿಗಳು, ಕುಡಿಯುವ ನೀರಿನ ಯೋಜನೆ, ನೈರ್ಮಲೀಕರಣ ಕುರಿತು ಚರ್ಚಿಸಲಾಯಿತು.
ಮುಖ್ಯಾಧಿಕಾರಿ ಪ್ರಭಾಕರ ದೊಡಮನಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಅಧ್ಯಕ್ಷರಾದ ಸುನಂದಾ ಕಲ್ಲು, ಉಪಾಧ್ಯಕ್ಷೆ ನಾಗರತ್ನಾ ಜಮಖಂಡಿ, ಸದಸ್ಯ ಪರಶುರಾಮ ಬೇಕನೆಕರ ಮಾತನಾಡಿದರು.
ಎನ್.ಬಿ. ನಿಡವಣಿ ವಿಷಯ ಮಂಡಿಸಿದರು. ಪ್ರಸ್ತುತ ಸಾಲಿನ 13ನೇ ಹಣಕಾಸು ಯೋಜನೆಯ ರು. 80.17 ಲಕ್ಷ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಹಾಗೂ 2011-12ನೇ ಸಾಲಿನಲ್ಲಿ ಎಸ್ಎಫ್ಸಿ ಯೋಜನೆಯಲ್ಲಿ ಮೀಸಲಿಟ್ಟ ರು. 50 ಲಕ್ಷಗಳ ಸಮುದಾಯ ಭವನ ನಿರ್ಮಾಣದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕಾಮಗಾರಿಗಳ ಕ್ರಿಯಾ ಯೋಜನೆ ಬಗ್ಗೆ ಅಭಿಯಂತೆ ಉಮಾ ಗದಗಕರ ಸಭೆಗೆ ತಿಳಿಸಿದರು. ಸದಸ್ಯರಾದ ಭಾಗ್ಯವತಿ ಕುರುಬರ, ಮಂಜುಳಾ ಮೇದಾರ, ನಾಗರತ್ನಾ ವಾಗ್ಮೋಡೆ, ಅನ್ನಪೂರ್ಣಾ ಹಿರೇಮಠ, ಛಗನಲಾಲ ಪಟೇಲ, ಕಿರಣ ಗಡಕರ, ಪರಮೇಶ್ವರ ತೇಗೂರ, ತಮೀಮ ತೇರಗಾಂವ, ಶಫೀಕ ತೋಲಗಿ, ರಾಜೇಶ ಬೈಕೆರಿಕರ, ಮಹ್ಮದ್ ಉಸ್ಮಾನ್ ಭಾತಖಂಡೆ, ಜೈಲಾನಿ ಸುದರ್ಜಿ, ಪರಶುರಾಮ ಬೇಕನೇಕರ ಇದ್ದರು.