ಮನೆ, ನಿವೇಶನಕ್ಕೆ ಮೊರೆ

Updated on: 

ಹುಬ್ಬಳ್ಳಿ: ದೀನದಲಿತರಿಗೆ ಮನೆ, ಡಿ ಗ್ರೂಪ್ ಸರ್ಕಾರಿ ನೌಕರರಿಗೆ ನಿವೇಶನ, ಕ್ರೀಡಾಂಗಣ, ರಸ್ತೆ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದ ತನಿಖೆ ಸೇರಿದಂತೆ ಸಾಕಷ್ಟು ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಅವರಲ್ಲಿ ಮನವಿ ಮಾಡಿದರು.
ಬುಧವಾರ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಸಚಿವ ಗುಂಡೂರಾವ್, ಸರ್ಕಾರದ ವಿವಿಧ ಯೋಜನೆಯಡಿ ಧಾರವಾಡ ಜಿಲ್ಲೆಯ ಬಡಜನರಿಗೆ ನಿವೇಶನ, ಮನೆ ನಿರ್ಮಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ರಸ್ತೆ ಅಭಿವೃದ್ಧಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ಡಿ ಗ್ರೂಪ್ ನೌಕರರ ಸಂಘ ಸದಸ್ಯರು ಮನವಿ ಸಲ್ಲಿಸಿ, 15 ವರ್ಷದ ಹಿಂದೆ ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೋಬಳಿಯ ಕೃಷ್ಣಾಪುರ ಗ್ರಾಮದ ಬಳಿ ನಿವೇಶನ ನೀಡುವುದಾಗಿ ಹೇಳಲಾಗಿತ್ತು. ಆದರೆ ಈವರೆಗೂ ನಿವೇಶನ ನೀಡುವ ಕೆಲಸ ಕಾರ್ಯರೂಪಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಏನಾದರೂ ಕಾನೂನು ತೊಡಕುಗಳಿದ್ದರೆ ಅದನ್ನು ದೂರಗೊಳಿಸಿ ನಿವೇಶನ ನೀಡಬೇಕೆಂದು ಮನವಿ ಮಾಡಿದರು.
ಮಾಹಿತಿ ಹಕ್ಕು ಹೋರಾಟಗಾರ ಮೋಹನ ಮಾಳಿಗೇರ ಮನವಿ ಸಲ್ಲಿಸಿ, ರಸ್ತೆ ನಿರ್ಮಾಣ ಕಾಮಗಾರಿಯ ಹೆಸರಲ್ಲಿ ರು. 22.50 ಕೋಟಿ ಸಾಲ ಪಡೆದು ಅದಕ್ಕೆ ರು. 5 ಕೋಟಿ ಪಾಲಿಕೆ ಬಡ್ಡಿ ಕಟ್ಟಿದೆ. ಈವರೆಗೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ, ಬಾಕಿ ಹಣ ಏನಾಗಿದೆ ಎಂಬ ಮಾಹಿತಿಯಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.
ಸಮತಾಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿ, ವಾರ್ಡ್ ನಂ. 41ರಲ್ಲಿ ಪ.ಜಾ. ಪ. ಪಂ.ದ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಶೇ. 18ರ ಅನುದಾನಿತ ಹಣದಲ್ಲಿ ಕಲ್ಯಾಣ ಮಂಟಪ ನಿರ್ಮಿಸಬೇಕೆಂದರು. ಜತೆಗೆ ಹಳೆಹುಬ್ಬಳ್ಳಿ ಕೃಷ್ಣಾಪುರ ಗ್ರಾಮದಲ್ಲಿ ಶೇ. 18ರ ಯೋಜನೆಯಡಿ 1980ರಲ್ಲಿ ಪ.ಜಾ. ಪ. ಪಂ.ದ ಜನರಿಗೆ ಮೀಸಲಿಟ್ಟ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು, ಹೆಗ್ಗೇರಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಮೂಲಸೌಕರ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು. ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್, ಪಾಲಿಕೆ ಆಯುಕ್ತ ರಮಣದೀಪ್ ಚೌಧರಿ ಮತ್ತಿತರರಿದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com