- ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 16
ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲೀಗ ಸಾಮಾಜಿಕ ಜಾಲತಾಣಗಳು ಸದ್ದು ಮಾಡುತ್ತಿವೆ. ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರನ್ನು ತಲುಪಲು ಮೋದಿ ನೇತೃತ್ವದಲ್ಲಿ ಬಿಜೆಪಿ ಅನುಸರಿಸಿದ್ದ ತಂತ್ರವನ್ನು ಪ್ರಜ್ಞಾವಂತರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲೂ ಬಳಸಲಾಗುತ್ತಿದೆ.
ಈ ಹಿಂದೆ ಪದವೀಧರ ಕ್ಷೇತ್ರದ ಚುನಾವಣೆ ನಡೆದಿದ್ದು ಮತದಾರರು ಹೊರತುಪಡಿಸಿ, ಇನ್ಯಾರ ಗಮನಕ್ಕೂ ಬರುತ್ತಿರಲಿಲ್ಲ. 2008ರಿಂದ ಈಚೆಗೆ ಪಶ್ಚಿಮ ಪದವೀಧರ ಚುನಾವಣೆಯಲ್ಲೂ ಒಂದಿಷ್ಟು ತುರುಸು, ಮತದಾರರ ಓಲೈಕೆ ನಡೆದಿದೆ.
ಆರು ವರ್ಷಕ್ಕೊಮ್ಮೆ ನಡೆಯುವ ಈ ಚುನಾವಣೆಯನ್ನು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಮಾತ್ರ ಗಂಭೀರವಾಗಿ ಪರಿಗಣಿಸಿ, ತಯಾರಿ ನಡೆಸುತ್ತಾರೆ. ಚುನಾವಣೆಯಲ್ಲಿ ಸದ್ದು-ಗದ್ದಲ ಇರುವುದೇ ಇಲ್ಲ. ನಾಲ್ಕು ಜಿಲ್ಲೆಗಳಲ್ಲಿ ಹಂಚಿ ಹೋಗಿರುವ ಮತದಾರರನ್ನು ಸಂಪರ್ಕಿಸುವುದು ಅಭ್ಯರ್ಥಿಗಳಿಗೆ ಕಷ್ಟವಾಗುತ್ತದೆ. ಹೀಗಾಗಿ, ಪ್ರಜ್ಞಾವಂತ ಮತದಾರರ ಓಲೈಸಲು ಅವರೀಗ ಸಾಮಾಜಿಕ ಜಾಲತಾಣಗಳಿಗೆ ಶರಣು ಹೋಗಿದ್ದಾರೆ.
ಏನೆಲ್ಲ ತಂತ್ರ?
ಸಾಮಾಜಿಕ ತಾಣಗಳಾದ ಫೇಸ್ಬುಕ್, ಟ್ವಿಟರ್, ಮೇಲ್, ವಾಟ್ಸ್ಆ್ಯಪ್, ಎಸ್ಸೆಮ್ಮೆಸ್ಗಳ ಮುಖಾಂತರ ಅಭ್ಯರ್ಥಿಗಳು ತಮಗೇ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಸುಮಾರು 1 ಲಕ್ಷ ಮತದಾರರಿದ್ದು, ಅವರಲ್ಲಿ ಬಹುತೇಕರ ಮೊಬೈಲ್ ಸಂಖ್ಯೆಗಳನ್ನು ಪಡೆದು, ಸಾಮಾಜಿಕ ಜಾಲತಾಣಗಳ ಮೂಲಕ ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ. ಈ ಕೆಲಸದಲ್ಲಿ ಯುವಕರ ಪಡೆಯೇ ತೊಡಗಿಸಿಕೊಂಡಿದೆ.
ವಸಂತ ಹೊರಟ್ಟಿ ಮುಂದೆ
ಕಣದಲ್ಲಿರುವ 16 ಅಭ್ಯರ್ಥಿಗಳೂ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಮತದಾರರ ಮನಗೆಲ್ಲಲು ಯತ್ನಿಸುತ್ತಿದ್ದಾರೆ. ಆದರೆ ಸಾಮಾಜಿಕ ತಾಣವನ್ನು ಸಮರ್ಪಕವಾಗಿ ಬಳಸಿಕೊಂಡವರಲ್ಲಿ ವಸಂತ ಹೊರಟ್ಟಿ ಮುಂದಿದ್ದಾರೆ. ಸುಮಾರು 40 ಸಾವಿರ ಮತದಾರರ ಮೊಬೈಲ್ ಸಂಖ್ಯೆ ಕಲೆ ಹಾಕಿರುವ ಅವರು ನಿತ್ಯ 3-4 ಬಾರಿ ಎಸ್ಸೆಮ್ಮೆಸ್, ವಾಟ್ಸ್ ಆ್ಯಪ್ ಮೂಲಕ ಚಿತ್ರ, ಮೇಲ್, ಫೇಸ್ಬುಕ್ನಲ್ಲೂ ವಸಂತ ಹೊರಟ್ಟಿ ಮಿಂಚುತ್ತಿದ್ದಾರೆ. ಹುಬ್ಬಳ್ಳಿಯ ಪ್ರತಿಷ್ಠಿತ್ ಸಿನಿಮಾ ಮಾಲ್ಗಳಲ್ಲೂ ವಸಂತ ಹೊರಟ್ಟಿ ಪರ ಪ್ರಚಾರ ಜೋರಾಗಿದೆ. ಎಲ್ಲ ತಂತ್ರಜ್ಞಾನಗಳನ್ನು ಬಳಸಿಕೊಂಡು ವಸಂತ ಹೊರಟ್ಟಿ ಮತದಾರರ ಮನಗೆಲ್ಲಲು ಯತ್ನಿಸಿದ್ದಾರೆ.
ಪಕ್ಷದ ಬ್ಯಾನರ್ ಅಡಿ ನಡೆಯುವ ಸಭೆ-ಸಮಾರಂಭಕ್ಕಿಂತ ಹೆಚ್ಚಾಗಿ ಸಾಮಾಜಿಕ ತಾಣಗಳು ಪರಿಣಾಮಕಾರಿಯಾಗಿವೆ. ಎಲ್ಲ ಅಭ್ಯರ್ಥಿಗಳು ಸಾಮಾಜಿಕ ತಾಣದ ಮೊರೆ ಹೋಗಿದ್ದಾರೆ.