ಹುಬ್ಬಳ್ಳಿ/ಧಾರವಾಡ: ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿದ್ದರೂ, ಮತದಾನಕ್ಕೆ ಪದವೀಧರರು ನಿರಾಸಕ್ತಿ ತೋರಿದರು. ಮತದಾರ ಪಟ್ಟಿಯಲ್ಲಿ ಗೊಂದಲ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೆಸರು ಕಾಣೆ, ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಸಂಸದ ಪ್ರಹ್ಲಾದ ಜೋಶಿ ಪತ್ನಿ ಜ್ಯೋತಿ ಜೋಶಿ ಮತ ಹಾಕಿದ್ದು ಇತ್ಯಾದಿ ಎಡವಟ್ಟುಗಳು ನಡೆದವು.
ಧಾರವಾಡ, ಉತ್ತರ ಕನ್ನಡ, ಹಾವೇರಿ ಮತದಾರರು ಅಂಥ ಆಸಕ್ತಿ ತೋರಲಿಲ್ಲ. ಗದಗ ಜಿಲ್ಲೆಯಲ್ಲಿ ಮಾತ್ರ ಒಂದಷ್ಟು ತುರುಸಿನ ಮತದಾನವಾಯಿತು. ಒಟ್ಟಾರೆ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 49.47 ಮತದಾನವಾಗಿದೆ ಎಂದು ಚುನಾವಣಾಧಿಕಾರಿ ವಿ.ಬಿ. ಪಾಟೀಲ್ ಹೇಳಿದ್ದಾರೆ.
ಮತ ವಂಚಿತ ಶೆಟ್ಟರ್: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ನಾಡೋಜ ಪಾಟೀಲ ಪುಟ್ಟಪ್ಪ ಅವರ ಹೆಸರು ಮತದಾರರ ಪಟ್ಟಿಯಿಂದ ಕಣ್ಮರೆಯಾಗಿತ್ತು. ಶೆಟ್ಟರ್ ಮತಗಟ್ಟೆ ಬಳಿ ಸುತ್ತಾಡಿ ಕಾರ್ಯಕರ್ತರನ್ನು ಹುರಿದುಂಬಿಸಿ ಮುನ್ನಡೆದರು.
ಸಂಸದರ ಪತ್ನಿಯ ಮತ ರಾಮಾಯಣ: ಸಂಸದ ಪ್ರಹ್ಲಾದ ಜೋಶಿಯವರ ಪತ್ನಿ ಹುಬ್ಬಳ್ಳಿಯ ಫಾತಿಮಾ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇಂಗ್ಲಿಷ್ ಮತಪಟ್ಟಿಯಲ್ಲಿ ಪ್ರಹ್ಲಾದ ಗುಮಾಸ್ತೆ ಎಂದಷ್ಟೇ ನಮೂದಾಗಿತ್ತು. ಜ್ಯೋತಿ ಹೆಸರಿರಲಿಲ್ಲ. ಅವರ ತಂದೆ ಪ್ರಹ್ಲಾದ ಗುಮಾಸ್ತೆ ಹೆಸರಲ್ಲೇ ಜ್ಯೋತಿ ಮತ ಹಾಕಿದಂತಾಯಿತು. ಸ್ವಾರಸ್ಯ ಎಂದರೆ, ಕನ್ನಡ ಮತಪಟ್ಟಿಯಲ್ಲಿ ಜ್ಯೋತಿ ಪ್ರಹ್ಲಾದ ಗುಮಾಸ್ತೆ ಎನ್ನುವ ಹೆಸರಿತ್ತು. ಆದರೆ ವಿಳಾಸ ಗೋಕುಲ ರಸ್ತೆ ಅಕ್ಷಯ ಕಾಲನಿ ಎಂದಿತ್ತು. ಅದು ಫಾತಿಮಾ ಶಾಲೆ ಮತಗಟ್ಟೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಗೊಂದಲವನ್ನು ವಿರೋಧ ಪಕ್ಷಗಳು ಗಂಭೀರವಾಗಿ ಪರಿಗಣಿಸಲಿಲ್ಲ.
ಹೊರಟ್ಟಿ ಆಕ್ರೋಶ: ಫಾತಿಮಾ ಶಾಲೆಯ ಮತಗಟ್ಟೆ ಬಳಿ 100 ಮೀ. ವ್ಯಾಪ್ತಿಯ ಹೊರಗೆ ಮೇಜಿಗೆ ಕಟ್ಟಿದ್ದ ಜೆಡಿಎಸ್ ಬ್ಯಾನರ್ ಬಿಚ್ಚಿಸಿದ್ದು ಹಾಗೂ ಲ್ಯಾಪಟಾಪ್ನ್ನು ಕೇಶ್ವಾಪುರ ಠಾಣೆ ಪಿಎಸ್ಐ ಪಿ.ಕೆ. ಪಾಟೀಲ ವಶ ಪಡಿಸಿಕೊಂಡಿದ್ದಕ್ಕೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದರು. 100 ಮೀ. ಒಳಗಿದ್ದ ಬಿಜೆಪಿ ಬ್ಯಾನರ್ ತೆಗೆಸದೆ ಪಿಎಸ್ಐ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯುವ ಮತದಾರರ ನಿರಾಸಕ್ತಿ: ಹೆಚ್ಚಿನ ಸಂಖ್ಯೆಯಲ್ಲಿದ್ದ ಯುವ ಮತದಾರರಂತೂ ಮತಗಟ್ಟೆಯತ್ತ ಸುಳಿಯಲೇ ಇಲ್ಲ. ಸರ್ಕಾರ ಸಾಂದರ್ಭಿಕ ರಜೆ ಘೋಷಿಸಿದ್ದರೂ ಖಾಸಗಿ ಶಾಲಾ-ಕಾಲೇಜು, ಕೈಗಾರಿಕೆಗಳು ಸಹಕಾರ ತೋರದಿರುವುದು ಕಂಡು ಬಂತು. ಇದರಿಂದ ಮತದಾನಕ್ಕೆ ಬರಲು ಹಲವರಿಗೆ ಅಡ್ಡಿಯಾಯಿತು. ಅಭ್ಯರ್ಥಿಗಳು ಹಾಗೂ ಪಕ್ಷಗಳು ಪ್ರಚಾರ ಮಾಡಿದ್ದು ಬಿಟ್ಟರೆ, ಆಯೋಗ ಜಾಗೃತಿ ಮೂಡಿಸದೇ ಇರುವುದೂ ಮತದಾನ ಪ್ರಮಾಣ ಕಮ್ಮಿಯಾಗಲು ಕಾರಣವಾಯಿತು. ಕ್ಷೇತ್ರದಲ್ಲಿ 94,364 ಮತದಾರರಿದ್ದು, ಶೇ. 50ರಷ್ಟು ಮತದಾನವಾಗಿದ್ದರೆ ಅಚ್ಚರಿ. ನಿರ್ಣಾಯಕ ಫಲಿತಾಂತ ನೀಡಬೇಕಿದ್ದ 42,293 ಮತದಾರರನ್ನು ಹೊಂದಿರುವ ಧಾರವಾಡ ಜಿಲ್ಲೆಯೇ ಮತದಾನಕ್ಕೆ ನಿರಾಸಕ್ತಿ ತೋರಿದ್ದು ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಮಧ್ಯಾಹ್ನ ಸುಮಾರು ಒಂದು ಗಂಟೆ ಮಳೆ ಸುರಿದ ಕಾರಣವೂ ಮತದಾನಕ್ಕೆ ತುಸು ಅಡ್ಡಿ ಉಂಟಾಯಿತು.
ಎಲ್ಲೆಲ್ಲಿ ಮತದಾನ? ಮಾಜಿ ಸಚಿವ ಬಸವರಾಜ ಹೊರಟ್ಟಿ ಹಾಗೂ ಅವರ ಸೊಸೆ ಮಧುಲಿಕಾ ವಸಂತ ಹೊರಟ್ಟಿ ಕೇಶ್ವಾಪುರ ಕಾನ್ವೆಂಟ್ ಸ್ಕೂಲ್ ಮತಗಟ್ಟೆಯಲ್ಲಿ, ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ಹಾಗೂ ವಿಪ ಸದಸ್ಯ ಶ್ರೀನಿವಾಸ ಮಾನೆ ಅಶೋಕ ನಗರ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ, ಸಂಸದ ಪ್ರಹ್ಲಾದ ಜೋಶಿ ಹಾಗೂ ಜ್ಯೋತಿ ಜೋಶಿ ಫಾತಿಮಾ ಶಾಲೆಯ ಮತಗಟ್ಟೆಯಲ್ಲಿ, ಧಾರವಾಡದ ಶಿಕ್ಷಕಿಯರ ತರಬೇತಿ ಕೇಂದ್ರದ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಚ್. ನೀರಲಕೇರಿ ಮತ ಚಲಾಯಿಸಿದರು.