ಉಣಕಲ್ ಕ್ರಾಸ್ ತುಂಬಾ ತ್ರಾಸ್

Updated on: 

ಉಣಕಲ್ ಕ್ರಾಸ್ ಬಳಿ ಪಾದಚಾರಿಗಳ ಸಂಕಟ ಹೇಳ ತೀರದು. ಈ ಪ್ರದೇಶದಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರೊಟ್ಟಿಗೆ ಟ್ರಾಫಿಕ್ ಜಾಮ್ ಇಲ್ಲಿ ಮಾಮೂಲಿ ಎಂಬಂತಾಗಿದೆ.
ಉಣಕಲ್ ಕ್ರಾಸ್‌ನಲ್ಲಿ ಐದು ಕೂಡು ರಸ್ತೆಗಳಿವೆ. ಸಾಯಿನಗರದತ್ತ ಹೋಗಲು ಎರಡು ಮಾರ್ಗ, ಧಾರವಾಡದತ್ತ, ಹುಬ್ಬಳ್ಳಿಯತ್ತ ಹಾಗೂ ಶಿರೂರ ಪಾರ್ಕ್‌ನತ್ತ ಹೋಗುವ ಒಟ್ಟೂ ಐದು ಮಾರ್ಗಗಳಿವೆ. ಏಕಕಾಲಕ್ಕೆ ಐದೂ ಮಾರ್ಗದಿಂದ ವಾಹನ ಬಂತೆಂದರೆ ಟ್ರಾಫಿಕ್ ಜಾಮ್ ಆಗುತ್ತದೆ. ಜತೆಗೆ ಐದೂ ದಿಕ್ಕಿನಿಂದ ವಾಹನಗಳು ಬರುವುದರಿಂದ ಪಾದಚಾರಿಗಳು ಯಾವ ಕಡೆ ನೋಡಿ ರಸ್ತೆ ದಾಟಬೇಕು ಎನ್ನುವ ಗೊಂದಲಕ್ಕೆ ಬೀಳುತ್ತಿದ್ದಾರೆ. ಧಾರವಾಡ-ಹುಬ್ಬಳ್ಳಿ ಮಧ್ಯೆ ಓಡಾಡುವ ವಾಹನವಂತೂ ರಭಸವಾಗಿ ಓಡಾಡುವುದರಿಂದ ರಸ್ತೆ ದಾಟುವುದು ಇಲ್ಲಿ ಕಷ್ಟಕರವಾಗಿದೆ. ಸಂಜೆ 5 ಗಂಟೆಯ ನಂತರವಂತೂ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಇಂಥ ಪ್ರಸಂಗದಲ್ಲಿ ಪರಿಸ್ಥಿತಿ ಹೇಳ ತೀರದು.
ಅಂದ ಹಾಗೆ, ಇಲ್ಲಿ ಹೊಸ ಸಿಗ್ನಲ್ ಲೈಟ್‌ಕಂಬ ಅಳವಡಿಸಲಾಗಿದೆಯಾದರೂ ಸರಿಸುಮಾರ ವರ್ಷವಾಗುತ್ತ ಬಂದರೂ ಲೈಟ್‌ಗಳು ಕೆಲಸ ಮಾಡುತ್ತಿಲ್ಲ. ಇನ್ನು ಇಲ್ಲಿ ಕಾಯಂ ಆಗಿ ಸಂಚಾರಿ ಪೊಲೀಸರನ್ನು ನೇಮಿಸಿಲ್ಲ. ಸಂಜೆ ಹೊತ್ತಿನಲ್ಲಿ ಕೆಲವೊಮ್ಮೆ ಪೊಲೀಸರು ಕಾಣಿಸಿಕೊಳ್ಳುತ್ತಾರೆಯಾದರೂ ಅವರು ಪಾನ್‌ಬೀಡಾ ಅಂಗಡಿಯ ಮುಂದೆಯೋ, ಕ್ರಾಸ್‌ನಲ್ಲಿರುವ ಲಕ್ಷ್ಮಿ ದೇವಸ್ಥಾನ ಬಳಿಯ ಆಟೋ ಚಾಲಕರೊಂದಿಗೋ ಹರಟೆ ಹೊಡೆಯುತ್ತಿರುತ್ತಾರೆ. ಟ್ರಾಫಿಕ್ ನಿರ್ವಹಣೆಯ ಕಾರ್ಯ ಎಂದೂ ಮಾಡಿಲ್ಲ. ಜತೆಗೆ ಕ್ರಾಸ್‌ನಲ್ಲಿ ಕಡಿದಾದ ರಸ್ತೆಯಿದೆ. ಕೆಲ ದಿನಗಳ ಹಿಂದಷ್ಟೇ ಪೊಲೀಸರು ಬ್ಯಾರಿಕೇಡ್ ಹಾಕಿ ಬಸ್ ಓಡಾಡಲು ಪ್ರತ್ಯೇಕ ಮಾರ್ಗ ಮಾಡಿಕೊಟ್ಟಿದ್ದಾರೆಯಾದರೂ ಬಸ್‌ಗಳು ಅಲ್ಲಿಂದ ಓಡಾಡುತ್ತಿಲ್ಲ. ನಿತ್ಯ ಸಣ್ಣ ಪುಟ್ಟ ಅಪಘಾತಗಳು ಇಲ್ಲಿ ನಡೆಯುತ್ತಲೇ ಇರುತ್ತದೆ. ಅಪಘಾತ ಸಂಭವಿಸಿ ಜೀವ ಹೋಗುವ ಮುನ್ನ ಪೊಲೀಸರು ತುರ್ತಾಗಿ ಸಮಸ್ಯೆ ಪರಿಹರಿಸಲು ನಿಗಾ ವಹಿಸಬೇಕು.
- ಚಂದ್ರು ಅಂಬಿಗೇರ
ಉಣಕಲ್ ಕ್ರಾಸ್

ಮರ ಕಡಿದವರ ವಿರುದ್ಧ ಕ್ರಮ ಕೈಗೊಳ್ಳಿ
ಹುಬ್ಬಳ್ಳಿ ಮುರ್ಡೇಶ್ವರ ಫ್ಯಾಕ್ಟರಿ ರಸ್ತೆ ಮುಕುಂದ ನಗರ ಬಡಾವಣೆಯಲ್ಲಿ ದುಷ್ಕರ್ಮಿಗಳು ರುದ್ರಾಕ್ಷಿ ಮರವನ್ನು ಕಡಿದಿರುವುದು ನೋವು ತಂದಿದೆ. 10 ವರ್ಷಗಳಿಂದ ಈ ಗಿಡಕ್ಕೆ ಬಡಾವಣೆಯ ನಿವಾಸಿಗಳು ನೀರುಣಿಸಿ ಪೋಷಿಸುತ್ತಾ ಬಂದಿದ್ದೇವೆ. ಹಿಮಾಲಯ ತಪ್ಪಲಲ್ಲಿ ರುದ್ರಾಕ್ಷಿ ಮರಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಭಾಗದಲ್ಲಿ ವಿರಳ. ಈ ಗಿಡದಿಂದ ಸ್ಥಳೀಯ ನಿವಾಸಿಗಳು ರುದ್ರಾಕ್ಷಿ ತೆಗೆದು ಪೂಜೆ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಇಲ್ಲಿನ ಮನೆಯೊಂದಕ್ಕೆ ವಿದ್ಯುತ್ ಪೂರೈಕೆಗೆ ತೊಂದರೆಯಾಗುತ್ತದೆ ಎಂಬ ಏಕೈಕ ಕಾರಣಕ್ಕೆ ಮರ ಕಡಿಯಲಾಗಿದೆ. ಇದು ನಿವಾಸಿಗಳಿಗೆ ನೋವು ತರಿಸಿದೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಮರ ಕಡಿದಿರುವುದು ಅಪರಾಧ. ಅದಕ್ಕೂ ಮುಖ್ಯವಾಗಿ ಬಡಾವಣೆ ನಿವಾಸಿಗಳ ಭಕ್ತಿಯ ಪ್ರತಿರೂಪವಾಗಿದ್ದ ಅಪರೂಪದ ಮರಕ್ಕೆ ಕೊಡಲಿಯೇಟು ನೀಡಿದ್ದು ಅಕ್ಷಮ್ಯ. ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ.
- ಮುಕುಂದ ನಗರ ಬಡಾವಣೆ ನಿವಾಸಿಗಳು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com