ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 24
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಂತೆಯೇ ಮುಂದೊಂದು ದಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೂ ತ್ಯಾಜ್ಯ ನಿರ್ವಹಣೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.
ಹುಬ್ಬಳ್ಳಿ ಕಾರವಾರ ರಸ್ತೆಯ ಕೆಂಪಗೇರಿ ಹಾಗೂ ಧಾರವಾಡ ಹೊಸಾಯಲ್ಲಾಪುರದ ಸ್ಮಶಾನದ ಬಳಿ ಅವಳಿ ನಗರದ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಮರುಬಳಕೆಯಾಗದ ತ್ಯಾಜ್ಯ ಸುತ್ತಲಿನ ಪ್ರದೇಶಕ್ಕೆ ಹರಡುತ್ತಿದೆ.
ಅವಳಿನಗರ ತ್ಯಾಜ್ಯ ಸಂಗ್ರಹಕ್ಕೆಂದು ಪಾಲಿಕೆ ಹುಬ್ಬಳ್ಳಿ-ಧಾರವಾಡಕ್ಕೆ ಮಧ್ಯವರ್ತಿ ಸ್ಥಳ ಎನ್ನ್ನಬಹುದಾದ ಶಿವಳ್ಳಿಯಲ್ಲಿ ಸುಮಾರು 67 ಎಕರೆ ಜಮೀನು ಖರೀದಿಸಿದ್ದರೂ ಇದುವರೆಗೂ ಅದರ ಬಳಕೆ ಮಾಡಿಲ್ಲ. ಭವಿಷ್ಯದ 20-25 ವರ್ಷಗಳ ದೂರದೃಷ್ಟಿಯಿಂದ ಶಿವಳ್ಳಿಯಲ್ಲಿ ಭೂಮಿ ಖರೀದಿಸಿದ್ದರೂ ಅಲ್ಲಿಗೆ ತ್ಯಾಜ್ಯ ಸಾಗಣೆ ವೆಚ್ಚ ಅಧಿಕವಾಗುತ್ತದೆ ಎಂಬ ಹಿನ್ನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಈಗಿನ ತ್ಯಾಜ್ಯ ಸಂಗ್ರಹ ಘಟಕಗಳ ಜಾಗದಲ್ಲಿಯೇ ಪ್ರತ್ಯೇಕ ವಿಲೇವಾರಿ ಘಟಕ ಸ್ಥಾಪನೆಗೆ ಚಿಂತಿಸಲಾಗಿತ್ತು. ಅವಳಿ ನಗರದಲ್ಲಿ ನಿತ್ಯವೂ ಸುಮಾರು 400-500 ಟನ್ನಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದ್ದರೂ ಇದರ ವಿಲೇವಾರಿ ಮಾತ್ರ ಅತ್ಯಲ್ಪ ಎಂದೇ ಹೇಳಬಹುದು. ಹುಬ್ಬಳ್ಳಿಯಲ್ಲಿ ಸುಮಾರು 250ರಿಂದ 300 ಟನ್, ಧಾರವಾಡದಲ್ಲಿ 150-200 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹಿಂದಿನ ಚಿಂತನೆಯಂತೆ ಪ್ರತ್ಯೇಕ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾದರೆ ದೊಡ್ಡ ಕಂಪನಿಗಳಿಗೆ ಅಗತ್ಯವಿರುವಷ್ಟು ತ್ಯಾಜ್ಯ ದೊರೆಯದೆಂಬ ಕಾರಣ ದಿಂದಾಗಿ ಅವಳಿನಗರದ ತ್ಯಾಜ್ಯವನ್ನ್ನು ಒಂದೇ ಕಡೆ ಸಂಗ್ರಹಿಸಿ ಅಲ್ಲಿಯೇ ಘಟಕ ಸ್ಥಾಪನೆಗೆ ಯೋಜಿಸಲಾಗಿದೆ. ಪುಣೆ, ಮತ್ತಿತರ ಮಹಾ ನಗರಗಳಲ್ಲಿ ತ್ಯಾಜ್ಯ ವಿಲೇವಾರಿ, ಮರುಬಳಕೆ ವೀಕ್ಷಿಸಿರುವ ಪಾಲಿಕೆ ಸದಸ್ಯರು, ಅಧಿಕಾರಿಗಳು, ಹುಬ್ಬಳ್ಳಿ-ಧಾರವಾಡದಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಮರುಬಳಕೆಯನ್ನು ಇದುವರೆಗೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ನಗರದ ಘನ ತ್ಯಾಜ್ಯ ವಿಲೇವಾರಿ ಮಾಡುವ ಕಾರವಾರ ರಸ್ತೆಯ ಡಂಪಿಂಗ್ ಯಾರ್ಡ್ನಲ್ಲಿ ಕಸದಿಂದ ಗ್ಯಾಸ್ ತಯಾರಿಸಿ ಅದರಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸುವ ಕುರಿತು 2007ರಲ್ಲಿಯೇ ಯೋಜನೆ ಸಿದ್ಧಗೊಂಡಿದ್ದರೂ 2009ರಲ್ಲಿ ರಾಜ್ಯ ಸರ್ಕಾರ ಆ ಯೋಜನೆಯನ್ನ್ನು ತಿರಸ್ಕರಿಸಿತ್ತು.
ಶಿವಳ್ಳಿ ಘಟಕ ತಿರಸ್ಕೃತ
2009ರಲ್ಲಿ ಹೊಸದಾಗಿ ತಯಾರಿಸಲಾದ ಯೋಜನೆಯಂತೆ ಧಾರವಾಡದ ಹೊಸ ಯಲ್ಲಾಪುರ, ಕಾರವಾರದ ಕೆಂಪಗೇರಿಯಲ್ಲಿ ತ್ಯಾಜ್ಯ್ನ ವಿಂಗಡಣೆ ಮಾಡಿ ಶಿವಳ್ಳಿಯ ಲ್ಯಾಂಡ್ ಫಿಲ್ಲಿಂಗ್ ಘಟಕದಲ್ಲಿ ವಿಲೇವಾರಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಯೋಜನೆಗೆ 2013ರಲ್ಲಿ ಸರ್ಕಾರ ಮಂಜೂರಾತಿಯನ್ನೂ ನೀಡಿತ್ತು ಮತ್ತು ಟೆಂಡರ್ ಪ್ರಕ್ರಿಯೆಯೂ ಪೂರ್ಣವಾಗಿತ್ತು. ಕೊನೆ ಕ್ಷಣದಲ್ಲಿ 'ಸ್ಕೋಪ್ ಆಫ್ ವರ್ಕ್' ಬದಲಿಸುವಂತೆ ಸೂಚಿಸಿ ಸರ್ಕಾರ ಮತ್ತೊಮ್ಮೆ ಯೋಜನ್ನೆ ತಿರಸ್ಕರಿಸಿತ್ತು.
ಇದೀಗ ಮತ್ತೆ ಡಿಸೈನ್, ಫೈನಾನ್ಸ್, ಬಿಲ್ಟ್, ಆಪರೇಟ್, ಟ್ರಾನ್ಸ್ಫರ್ (ಡಿಎಫ್ಬಿಒಟಿ) ಒಪ್ಪಂದದಡಿ ಘನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗಾಗಿ ವೈಜ್ಞಾನಿಕ ಸಂಸ್ಕರಣಾ ಹಾಗೂ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. ಈ ಘಟಕ ರು. 50.33 ಕೋಟಿ ಬಂಡವಾಳ ವೆಚ್ಚದಲ್ಲಿ ಸ್ಥಾಪನೆಯಾಗಲಿದ್ದು, ಟೆಂಡರ್ ಕರೆಯಲಾಗಿದೆ.
Advertisement