ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 25
ತಾಳಮದ್ದಲೆಗೆ 500ರಿಂದ 600 ವರ್ಷಗಳ ಇತಿಹಾಸವಿದ್ದು ಕುರುಗೋಡು ಶಾಸನ, ಬಳ್ಳಾರಿ ಬಳಿ ದೊರೆತ ಶಾಸನಗಳು ಇದನ್ನು ದೃಢಪಡಿಸುತ್ತವೆ ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಅಧಿಕಾರಿ, ಯಕ್ಷಗಾನ ಕಲಾವಿದ ದಿವಾಕರ ಹೆಗಡೆ ಅಭಿಪ್ರಾಯಿಸಿದರು.
ಇಲ್ಲಿಯ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಳಮದ್ದಲೆ ಎಂಬ ಆಶು ನಾಟಕ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ತಾಳಮದ್ದಲೆಯು ಹುಟ್ಟಿನಿಂದ ಹಾಡುಗಬ್ಬವಾಗಿದ್ದು ಬಯಲಾಟಕ್ಕಿಂತಲೂ ಹಳೆಯದು. ತಾಳಮದ್ದಲೆಯಲ್ಲಿ ಭಾಗವತರು ಮತ್ತು ಅರ್ಥಧಾರಿಗಳ ಗುಂಪುಗಳ ಪಾಲ್ಗೊಳ್ಳುವಿಕೆಯೊಂದಿಗೆ ಮುಂಚೆ ರಾತ್ರಿಯಿಂದ ಬೆಳಗಿನವರೆಗಿನ ಕಥಾ ಕಾಲಕ್ಷೇಪವಾಗಿರುತ್ತಿತ್ತು. ಕರಾವಳಿಗಳ ಎಲ್ಲ ಕನ್ನಡಗಳು ಸೇರಿದ್ದ ಅತೀ ಸ್ಥಳೀಯ ಶೈಲಿಯ ಈ ಕಲೆ ಮುಂದೆ ಪಂಡಿತರ ಪ್ರವೇಶದೊಂದಿಗೆ ಬೇರೆ ರೂಪ ತಳೆಯತೊಡಗಿತು ಎಂದರು.
ಸೇಡಿಯಾಪು ಕೃಷ್ಣ ಭಟ್ಟರಿಂದ ಲುಪ್ತನಾಟ್ಯವೆಂದು ಕರೆಯಲ್ಪಟ್ಟ ಈ ಕಲೆಯಲ್ಲಿ 600 ವರ್ಷಗಳ ಹಿಂದಿನ ಅವೇ ಪದ್ಯಗಳಿದ್ದರೂ ಪ್ರತಿಭಾವಂತರ ಅಪೂರ್ವ ಆಶುತ್ವದಿಂದಾಗಿ ಪ್ರತಿಬಾರಿಯೂ ಅದು ಬೇರೆ ಬೇರೆ ಅರ್ಥಗಳನ್ನೇ ಅನಾವರಣಗೊಳಿಸುವ ವಿಶಿಷ್ಟ ಕಲೆಯಾಗಿದೆ. ತಾಳಮದ್ದಲೆಯು ಕಥೆ, ಸಂಗೀತ, ತರ್ಕವೆಲ್ಲವುಗಳನ್ನೂ ಒಳಗೊಳ್ಳುತ್ತ ಮಹಾಕಾವ್ಯಗಳೇ ಆಕರಗಳಾಗಿ ಅದ್ಭುತ ಕಲೆಯಾಗಿದೆ ಎಂದು ದಿವಾಕರ ಹೆಗಡೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ರಜನಿ ಗರುಡ ಮಾತನಾಡಿ, ತಾಳಮದ್ದಲೆಯಲ್ಲಿ ಮುಖ್ಯವಾಗಿ ಅಪಾರ ವಿಷಯ ಸಂಗ್ರಹ, ಲೋಕಜ್ಞಾನಗಳು ಅರ್ಥಧಾರಿಯ ಸಾಮರ್ಥ್ಯವನ್ನು ಹಿಗ್ಗಿಸುತ್ತ ಹೋಗುತ್ತವೆ. ಇಲ್ಲಿ ಸಮುದಾಯದ ಅಸ್ಮಿತೆಯ ತಾಕತ್ತೇ ವಿಸ್ಮಯವಾಗಿದೆ. ಕಾಲ್ಪನಿಕ ಪಾತ್ರ, ಕಾಲ್ಪನಿಕ ಸನ್ನಿವೇಶಗಳಿಗೆ ಕಿಂಚಿತ್ತೂ ಅವಕಾಶವಿರದ ಈ ಕಲೆಯ ಮರುವ್ಯಾಖ್ಯಾನ ಇಂದಿನ ಯುವಕರ ನೈತಿಕ ಮೌಲ್ಯ ಹೆಚ್ಚಿಸಬಹುದಾಗಿದ್ದು, ಹಲವಾರು ದೈನಂದಿನ ಸಮಸ್ಯೆಗಳಿಗೆ ಸೂಕ್ತ ಉತ್ತರ ಕಾಣಬಹುದು ಎಂದರು.
ಕಲಾವಿದರಾದ ರಜನಿ ಗರುಡರು ಶ್ರುತಿ ಮತ್ತು ಶ್ರೀಧರ ಕುಲಕರ್ಣಿಯವರು ಹಾಡಿದ ಸಿಡಿ ಯೊಂದನ್ನು ಬಿಡುಗಡೆಗೊಳಿಸಿದರು. ನಂತರ ಶ್ರುತಿ-ಶ್ರೀಧರ ದಂಪತಿಗಳ ಭಕ್ತಿಗೀತೆ, ಭಾವಗೀತೆಗಳ ಮಧುರ ಗಾಯನ ನಡೆಯಿತು. ಹಾರ್ಮೋನಿಯಂನಲ್ಲಿ ಎಚ್.ಎಸ್. ಕುಲಕರ್ಣಿ ಮತ್ತು ತಬಲಾದಲ್ಲಿ ರೋಹಿತ ಕುಲಕರ್ಣಿ ಸಾಥ್ ನೀಡಿದರು. ಗಣ್ಯರಾದ ಪ್ರೊ. ಸಿ.ವಿ. ವೇಣುಗೋಪಾಲ, ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಪ್ರಕಾಶ ಭಟ್ಟ, ಪ್ರೊ. ದುಷ್ಯಂತ ನಾಡಗೌಡ, ಹ.ಶಿ. ಭೈರನಟ್ಟಿ, ಪ್ರೊ. ಎ.ಜಿ. ಸಬರದ, ಪ್ರೊ. ಸಿ.ಆರ್. ಜೋಶಿ, ಜಿ.ಸಿ. ತಲ್ಲೂರ, ಮಹಾಬಲೇಶ್ವರ ಸಿಂದಗಿ, ಶ್ರೀನಿವಾಸ ಕುಲಕರ್ಣಿ, ಅಶೋಕ ಜೋಶಿ, ಸತೀಶ ಪೊಲೀಸಗೌಡರ ಮತ್ತಿತರರು ಇದ್ದರು. ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ನಿರೂಪಿಸಿದರು.