ಹುಬ್ಬಳ್ಳಿ: ಬಸವ ಜಯಂತಿ ಅಂಗವಾಗಿ ಮೇ 2ರಂದು ಮಹಾನಗರ ಪಾಲಿಕೆ ವ್ಯಾಪ್ತಿಯ ವಧಾಲಯ, ಮಾಂಸದ ಅಂಗಡಿಗಳನ್ನು ಮುಚ್ಚಲಾಗುವುದು. ಸಂಬಂಧಿಸಿದ ವ್ಯಾಪಾರಸ್ಥರು ತಮ್ಮ ಮಾಂಸದ ಅಂಗಡಿಗಳನ್ನು ಅಂದು ಮುಚ್ಚಬೇಕು. ಇಲ್ಲದಿದ್ದರೆ ವ್ಯಾಪಾರಸ್ಥರ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಇಂದು ಬಸವ ಜಯಂತಿ
ಹುಬ್ಬಳ್ಳಿ: ಬಸವ ಸೇವಾ ಸಮಿತಿ ವತಿಯಿಂದ ಮೇ 2ರಂದು ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಬಸವ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಸೇವಾ ಸಮಿತಿ ಅಧ್ಯಕ್ಷ ವಿ.ವಿ. ಕುರ್ತಕೋಟಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8ಕ್ಕೆ ಬಸವ ಜಯಂತಿ ನಿಮಿತ್ತ ಬಸವೇಶ್ವರ ಪೂಜೆ, ಮಂತ್ರ ಪಠಣ ನಡೆಯಲಿದೆ. ಬಳಿಕ ಲಿಂಗದೀಕ್ಷೆ ನೀಡಲಾಗುವುದು. ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿಗಳಿಂದ ಪ್ರವಚನ ನಡೆಯಲಿದೆ. ಅನ್ನಸಂತರ್ಪಣೆ ನಂತರ ಸಂಜೆ 4ಕ್ಕೆ ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯು ಬನಶಂಕರಿ ಬಡಾವಣೆಯಿಂದ ಆರಂಭವಾಗಿ ನೇಕಾರ ಕಾಲನಿ, ವಿದ್ಯಾವನ, ರಂಭಾಪುರಿಶ್ವರ ನಗರ, ಕಲ್ಯಾಣ ನಗರ, ಆಕ್ಷಯ ಗಾರ್ಡನ್, ಮಿತ್ರಾ ವಿಶಾಲ ಪಾರ್ಕ್, ಸಿದ್ದೇಶ್ವರ ಪಾರ್ಕ್, ರಾಜೀವ ನಗರ, ದೇವಿ ನಗರ, ಶಿರೂರ ಪಾರ್ಕ್, ಭಾರತಿ ನಗರ, ರೇಲ ನಗರ, ಕಾಳಿದಾಸ ನಗರ, ಅಕ್ಷಯ ಕಾಲನಿ, ರವಿ ನಗರ, ಲಕ್ಷ್ಮಿ ನಗರ, ದಾನೇಶ್ವರಿ ನಗರ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು. ಮೆರವಣಿಗೆಯ ನಂತರ ಸಂಜೆ 7ಕ್ಕೆ ವಚನ ಆಧಾರಿತ ಮನರಂಜನೆ ಕಾರ್ಯಕ್ರಮ ನಡೆಯಲಿದ್ದು, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿ.ವಿ. ಕುರ್ತಕೋಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪಕ್ಕೀರೇಶ ಸೊರಟೂರ ಆಗಮಿಸುವರು. ಶಿವಕುಮಾರ ಪಾಟೀಲ ಅವರಿಂದ ವಚನ ಗಾಯನ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆರ್.ವಿ. ತಡಹಾಳ, ಕೆ.ಸಿ. ಪಾಟೀಲ, ಶ್ರೀಶೈಲ ತುಂಗಳದ ಮತ್ತು ಅನಿಲ ಕವಿಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ನಾಲ್ವರು ಕಳ್ಳರ ಬಂಧನ
ನವಲಗುಂದ: ಸಾವಿರಾರು ರುಪಾಯಿ ಮೌಲ್ಯದ ತಗಡಿನ ಶೆಡ್ ಹಾಗೂ ಕಬ್ಬಿಣದ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ನವಲಗುಂದದಲ್ಲಿ ನಡೆದಿದೆ. ತಿರ್ಲಾಪುರ ಗ್ರಾಮದ ಮಾರುತಿ ಯಮನಪ್ಪ ಕಟ್ಟಿಮನಿ, ಬ್ಯಾಹಟ್ಟಿ ಗ್ರಾಮದ ಚಂದು ಮಾರುತಿ ಹರಣಶಿಕಾರಿ, ಹೆಬಸೂರ ಗ್ರಾಮದ ಸಿದ್ದಪ್ಪ ಬಸಪ್ಪ ಹರಣಶಿಕಾರಿ, ಬ್ಯಾಹಟ್ಟಿ ಗ್ರಾಮದ ಬೀರಪ್ಪ ಯಲ್ಲಪ್ಪ ದೊಡ್ಡಮನಿ ಎಂಬುವವರೇ ಬಂಧಿತ ವ್ಯಕ್ತಿಗಳು. ಮತ್ತೊಬ್ಬ ಆರೋಪಿ ತಿರ್ಲಾಪುರದ ಯಲ್ಲಪ್ಪ ಕಾಳೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.