ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 5
ಬಸ್ ದರ ಏರಿಕೆ, ಚೆನ್ನೈನಲ್ಲಿ ಬಾಂಬ್ ಸ್ಫೋಟಗೊಂಡಿರುವುದನ್ನು ಖಂಡಿಸಿ ಸೋಮವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಹೆಸರಿಗೆ ಮಾತ್ರ ಆಡಳಿತ ನಡೆಸುತ್ತಿವೆ. ಜನರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಚುನಾವಣೆ ಫಲಿತಾಂಶ ಬಳಿಕ ಜನರ ಉತ್ತರ ಈ ಸರ್ಕಾರಗಳಿಗೆ ಗೊತ್ತಾಗಲಿದೆ. ಕೇಂದ್ರ ಸರ್ಕಾರ, ರಾಷ್ಟ್ರದಲ್ಲಿ ಶಾಂತಿ ಕಾಪಾಡುವಲ್ಲಿ ವಿಫಲವಾಗಿದೆ. ಚೆನ್ನೈನಲ್ಲಿ ನಡೆದ ಬಾಂಬ್ ಸ್ಫೋಟ್ ಉತ್ತಮ ನಿದರ್ಶನ. ರಾಜ್ಯ ಸರ್ಕಾರ ಬಸ್ ದರ ಹೆಚ್ಚಿಸುವ ಮೂಲಕ ಶ್ರೀಸಾಮಾನ್ಯರ ಗಾಯದ ಮೇಲೆ ಬರೆ ಎಳೆದಿದೆ ಎಂದು ದೂರಿದರು.
ಮಾಜಿ ಶಾಸಕಿ ಸೀಮಾ ಮಸೂತಿ, ಕೇಂದ್ರ, ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದರು. ಪ್ರಕಾಶ ಗೋಡಬೋಲೆ, ಬಸವರಾಜ ಬೆಣ್ಣಿ, ಬಸವರಾಜ ಮುತ್ತಳ್ಳಿ, ಶಂಕರ ಶೇಳಕೆ, ಮೋಹನ ರಾಮದುರ್ಗ, ಸುರೇಶ ಬೆದರೆ, ಅರವಿಂದ ಏಗನಗೌಡರ, ಭೀಮಸಿ ನೇಮಕಲ, ರಾಜು ಕೋಟೆಣ್ಣವರ, ನಾಗರಾಜ ನಾಯಕ, ಗೌಡಪ್ಪ ಪಾಟೀಲ ಮತ್ತಿತರರು ಇದ್ದರು.
ದರ ಹೆಚ್ಚಳ: ಖಂಡನೆ
ಧಾರವಾಡ: ಬಸ್ ದರ ಹೆಚ್ಚಳ ಖಂಡಿಸಿ ಬಿಜೆಪಿ ಗ್ರಾಮೀಣ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತ ವೈಫಲ್ಯದಿಂದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಹೀಗಾಗಿ ಜನಸಾಮಾನ್ಯರು ಬದುಕು ನಡೆಸಲು ಹರಸಾಹಸ ಪಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಜನರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಬದಲು, ಜನರನ್ನು ನೋವಿನ ಕೂಪಕ್ಕೆ ತಳುತ್ತಿದೆ. ರಾಜ್ಯದ ಜನರ ಪರಿಸ್ಥಿತಿಯನ್ನು ಅರಿತು ಸರ್ಕಾರ, ದರ ವಿಷಯದ ಮಧ್ಯ ಪ್ರವೇಶಿಸಿ ಸಾಮಾನ್ಯ ಜನರ ಹಿತ ಕಾಯಬೇಕೆಂದು ಒತ್ತಾಯಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ಗ್ರಾಮೀಣ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಮಹೇಶ ಗೋಕುಲ, ಮಲ್ಲಿಕಾರ್ಜುನ ಯರಿಹಕ್ಕಲ, ಚನ್ನಬಸಪ್ಪ ಜಗದಪ್ಪನವರ, ಬಸವರಾಜ ಮುದಕವಿ, ಮಂಜುನಾಥ ಜಕ್ಕಣ್ಣನವರ, ಶೇಷಾಚಲ ಕುಲಕರ್ಣಿ, ಚನ್ನಬಸಪ್ಪ ಮಡಿವಾಳರ, ಸುಭಾಸ ನಾಯ್ಕರ ಇದ್ದರು.