ಡೊನೇಷನ್ ಹಾವಳಿ ತಡೆಯಲು ಶಿಕ್ಷಣ ಫೀ ಅದಾಲತ್, ಮೇ 15ರ ಬಳಿಕ ತಿಳಿವಳಿಕೆ, ಹೆಚ್ಚಿನ ಶುಲ್ಕ ವಸೂಲಿ ಮಾಡಿದರೆ ಕಾನೂನು ಕ್ರಮ

Updated on

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 8
ಖಾಸಗಿ ಹಾಗೂ ಅನುದಾನಿತ ಶಾಲೆಗಳ ಮುಖ್ಯಸ್ಥರೇ ಎಚ್ಚರ... ಸರ್ಕಾರ ನಿಗದಿಪಡಿಸಿದ ಪ್ರವೇಶ ಶುಲ್ಕ ಹೊರತುಪಡಿಸಿ ಹೆಚ್ಚಿನ ಶುಲ್ಕ ಅಥವಾ ಡೊನೇಷನ್ ವಸೂಲಿ ಮಾಡಿದರೆ ಕಾನೂನು ಕ್ರಮ ನಿಶ್ಚಿತ...
ಶಿಕ್ಷಣ ಇಲಾಖೆ ಎಲ್ಲ ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ಕಳುಹಿಸಿರುವ ಸಂದೇಶವಿದು. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರ ಉದ್ಯಮವಾಗಿದ್ದು, ಖಾಸಗಿ ಸಂಸ್ಥೆಗಳಂತೂ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೂ ಸಾವಿರಾರು ರುಪಾಯಿ ಶುಲ್ಕ ಪಡೆಯುತ್ತಿವೆ. ಪ್ರಸ್ತುತ ಪೂರ್ವ ಹಾಗೂ ಪ್ರಾಥಮಿಕ ಶಾಲೆಗಳ ಪ್ರವೇಶಾತಿ ಪ್ರಕ್ರಿಯೆಯೂ ನಡೆಯುತ್ತಿದೆ. ಹೀಗಾಗಿ ಶಿಕ್ಷಣ ಇಲಾಖೆ ಪ್ರಥಮ ಬಾರಿಗೆ ಶಿಕ್ಷಣ ಫೀ ಅದಾಲತ್ ಎಂಬ ನೂತನ ಉಪಕ್ರಮದ ಮೂಲಕ ಹೆಚ್ಚಿನ ಪ್ರವೇಶ ಶುಲ್ಕ, ಡೊನೇಷನ್ ಹಾವಳಿ ತಡೆಯುವ ಒಂದು ಪ್ರಯತ್ನಕ್ಕೆ ಮುಂದಾಗಿದೆ.
ಏನಿದು ಫೀ ಅದಾಲತ್?: ಮೇ 15ರಿಂದ ಧಾರವಾಡ ಜಿಲ್ಲೆಯ ಕ್ಲಸ್ಟರ್ ಮಟ್ಟದಲ್ಲಿ ಈ ಶಿಕ್ಷಣ ಫೀ ಅದಾಲತ್ ಶುರುವಾಗಲಿದೆ. ಈ ಅದಾಲತ್‌ನಲ್ಲಿ ಆಯಾ ಕ್ಲಸ್ಟರ್ ಮಟ್ಟದ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪಾಲಕರು ಭಾಗವಹಿಸಲಿದ್ದಾರೆ. ಸರ್ಕಾರ ನಿಗದಿ ಮಾಡಿದ ಶುಲ್ಕವನ್ನು ಮಾತ್ರ ಪಡೆಯಬೇಕೆಂದು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಹಾಗೂ ನಿಗದಿತ ಶುಲ್ಕ ಮಾತ್ರ ತುಂಬಬೇಕೆಂದು ಪಾಲಕರಿಗೆ ತಿಳಿವಳಿಕೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದಿಲ್ಲವೆಂದು ಶಿಕ್ಷಣ ಸಂಸ್ಥೆಗಳು ಮುಂಚಿತವಾಗಿಯೇ ಸರ್ಕಾರಕ್ಕೆ ಲಿಖಿತ ಹೇಳಿಕೆ ನೀಡಿದ್ದು, ಅದಾಲತ್ ಸಂದರ್ಭದಲ್ಲಿ ಪಾಲಕರಿಂದ ದೂರುಗಳು ಬಂದರೆ ತಕ್ಷಣ ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
ಶಿಕ್ಷಣ ಸಂಸ್ಥೆಗಳು ಡೊನೇಷನ್ ರೂಪದಲ್ಲೂ ಪಾಲಕ ಅಥವಾ ಪೋಷಕರಿಂದ ಹಣ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಹೆಚ್ಚಿನ ಹಣ ವಸೂಲಿ ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಹುಡೇದಮನಿ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು.
ಯಾವ ಶಾಲೆ ಎಷ್ಟು ಶುಲ್ಕ ಪಡೆಯಲು ಅವಕಾಶವಿದೆ ಎಂಬುದನ್ನು ಈ ಬಾರಿ ವೆಬ್‌ಸೈಟ್ (ಢಿಢಿಢಿ.ಝಛ್ಠಢಿಛಜ.ಟ್ಝ್ಛಿ.್ಝಟಿ) ನಲ್ಲೂ ಹಾಕಲಾಗುವುದು. ಒಂದು ವೇಳೆ ಹೆಚ್ಚಿನ ಶುಲ್ಕ ವಸೂಲಿ ಮಾಡಿದರೆ ಪಾಲಕರು ಶಿಕ್ಷಣ ಫೀ ಅದಾಲತ್ ಅಥವಾ ಕಚೇರಿಗೆ ಆಗಮಿಸಿ ಲಿಖಿತ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ ಶಿಕ್ಷಣಾಧಿಕಾರಿ ಹುಡೇದಮನಿ.
ಇನ್ನೂ ಆರ್ಥಿಕ ಸಬಲತೆ ಕಾಣದ ಅನೇಕ ಬಡ ಕುಟುಂಬಗಳು ನಮ್ಮ ಮುಂದಿವೆ. ಜಾಣ ವಿದ್ಯಾರ್ಥಿಗಳ ಸಂಖ್ಯೆ ಬಡ ಕುಟುಂಬಗಳಲ್ಲಿಯೇ ಅಧಿಕವಾಗಿದ್ದು ತಮ್ಮ ಮಕ್ಕಳನ್ನು ಶ್ರೇಷ್ಠ ಶಿಕ್ಷಣದತ್ತ ಬೆಳೆಸಬೇಕೆಂಬ ಪಾಲಕರ ಕನಸುಗಳಿಗೆ ಡೊನೇಷನ್ ಅಡ್ಡಿಯಾಗಿದೆ. ದಿನಗೂಲಿ ಮಾಡಿಯೇ ಜೀವನ ಸಾಗಿಸುವ ಕುಟುಂಬಗಳಿಗೆ ಸಾವಿರಾರು ರುಪಾಯಿ ಡೊನೇಷನ್ ಕೊಡಿ ಎಂದರೆ ಎಲ್ಲಿಂದ ಕೊಡಬೇಕು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ನೂತನವಾಗಿ ಜಾರಿ ಮಾಡಿರುವ ಶಿಕ್ಷಣ ಫೀ ಅದಾಲತ್ ಕಾರ್ಯಕ್ರಮ ಬರಿ ಹೆಸರಿಗೆ ಮಾತ್ರ ನಡೆಯದೇ ಡೊನೇಷನ್ ಹಾವಳಿಗೆ ತಡೆ ಒಡ್ಡಬೇಕಿದೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪಾಲಕರು ಹಾಗೂ ಪೋಷಕರು ಸಹಕರಿಸಬೇಕಿದೆ.

ಬಸವರಾಜ ಹಿರೇಮಠ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com