ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 17
ಇದೇ ಮೊದಲ ಬಾರಿಗೆ ಆಡಳಿತ ಪಕ್ಷದ ಸಂಸದರಾಗಿರುವ ಪ್ರಹ್ಲಾದ ಜೋಶಿ ಈ ಸಲವಾದರೂ ಧಾರವಾಡ ಲೋಕಸಭೆ ಕ್ಷೇತ್ರದ ಸಮಸ್ಯೆಗಳ ಈಡೇರಿಕೆಗೆ ಮುಂದಾಗುವರೇ?
ಜೋಶಿಗಿದು ಹ್ಯಾಟ್ರಿಕ್ ಗೆಲವು. ಕಳೆದ ಎರಡು ಅವಧಿಗಳಲ್ಲೂ ಅವರು ಪ್ರತಿಪಕ್ಷ ಸ್ಥಾನದಲ್ಲೇ ಕೂರಬೇಕಾಯಿತು. ಕ್ಷೇತ್ರದ ಬೇಡಿಕೆಗಳಿಗಾಗಿ ಯುಪಿಎ ಸರ್ಕಾರದ ಮರ್ಜಿ ಕಾಯುವ ಅನಿವಾರ್ಯತೆಯೂ ಇತ್ತು. ಈ ಬಾರಿ ಎನ್ಡಿಎ ಅಧಿಕಾರ ಹಿಡಿದಿದೆ. ಬಿಜೆಪಿಯೊಂದೇ ಸ್ಪಷ್ಟ ಬಹುತಮ ಗಳಿಸಿದೆ. ಈ ಸಲ ಕ್ಷೇತ್ರದ ಪ್ರಮುಖ ಬೇಡಿಕೆಗಳು ಈಡೇರಬಹುದು ಎಂಬ ನಿರೀಕ್ಷೆ ಇದೆ.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ದಶಕಗಳಿಗೂ ಹೆಚ್ಚಿನ ಅವಧಿಯ ಬೇಡಿಕೆ. ಈ ಸಲವಾದರೂ ಇದಕ್ಕೆ ಚಾಲನೆ ಸಿಕ್ಕೀತೆಂಬ ಆಶಯ ವ್ಯಕ್ತವಾಗಿದೆ. ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಆಶಯ ಚಿಗುರೊಡೆದಿತ್ತು. ಆದರೆ, ಮಾರ್ಗ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ನ ಹಸಿರು ಪೀಠದಲ್ಲಿರುವ ತಡೆಯಾಜ್ಞೆ ತೆರವುಗೊಳಿಸದ ಹೊರತು, ಯೋಜನೆ ಪ್ರಗತಿ ಅಸಾಧ್ಯ. ಆದರೆ, ಕಡಿಮೆ ಅವಧಿಗೆ ರೇಲ್ವೆ ಸಚಿವರಾಗಿದ್ದ ಖರ್ಗೆ ಇದಕ್ಕೆ ಮನಸ್ಸು ಮಾಡಲೇ ಇಲ್ಲ.
ಸುಪ್ರೀಂ ಕೋರ್ಟ್ ಹಸಿರು ಪೀಠದ ನಿಯೋಗ ಕಳೆದ ಡಿಸೆಂಬರ್ನಲ್ಲಿ ಕಾರವಾರಕ್ಕೆ ಭೇಟಿ ನೀಡಿ, ಹುಬ್ಬಳ್ಳಿ-ಅಂಕೋಲಾ ಮಧ್ಯೆ ಪರ್ಯಾಯ ಮಾರ್ಗ ರಚಿಸುವಂತೆ ರೇಲ್ವೆ ಇಲಾಖೆಗೆ ಸೂಚಿಸಿದೆ. ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲೇ ರೈಲು ಮಾರ್ಗ ನಿರ್ಮಿಸಿದರೆ ಅರಣ್ಯ ಸಂಪತ್ತು ಹಾಳಾಗುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯವನ್ನ್ನು ಈ ನಿಯೋಗ ವ್ಯಕ್ತಪಡಿಸಿತ್ತು.
ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಟಿ.ವಿ. ರಾಮಚಂದ್ರನ್ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲೂ ಯೋಜನೆ ಜಾರಿಯ ಮಹತ್ವದ ಬಗ್ಗೆ ವಿವರಿಸಿದ್ದಾರೆ. ಈ ಯೋಜನೆಗೆ 800 ಹೆಕ್ಟೇರ್ಗಿಂತಲೂ ಕಡಿಮೆ ಅರಣ್ಯ ಪ್ರದೇಶ ಬೇಕಾಗಿದ್ದು, ಈ ದೃಷ್ಟಿಯಿಂದ ಇದು ಯೋಗ್ಯ ಯೋಜನೆ ಎಂದು ವರದಿಯಲ್ಲಿ ಅಭಿಪ್ರಾಯ ನೀಡಿದ್ದಾರೆ.
ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕಾಗಿ ಕಲಘಟಗಿ ತಾಲೂಕಿನ ದೇವಿಕೊಪ್ಪವರೆಗಿನ 35 ಕಿ.ಮೀ. ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಪೂರ್ಣಗೊಂಡಿದೆ. ಇದಕ್ಕಾಗಿ ರು. 85 ಕೋಟಿಗೂ ಹೆಚ್ಚಿನ ಹಣ ವೆಚ್ಚವಾಗಿದೆ.
ಇದೀಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿರುವುದರಿಂದ ಸಂಸದ ಪ್ರಹ್ಲಾದ ಜೋಶಿ ಅವರು ಸುಪ್ರಿಂಕೋರ್ಟ್ ಹಸಿರು ಪೀಠದ ಎದುರಿಗಿರುವ ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಬೇಕಿದೆ.
ಕಳಸಾ-ಬಂಡೂರಿ: ಕಳಸಾ-ಬಂಡೂರಿ ಯೋಜನೆ ಅನುಷ್ಠಾನವೂ ಅಡಕತ್ತರಿಯಲ್ಲಿ ಸಿಲುಕಿದೆ. ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆಯಬೇಕಿದೆ.
ಯೋಜನಾ ಆಯೋಗದ ಪ್ರತ್ಯೇಕ ಅನುಮತಿಯೂ ಅನಿವಾರ್ಯವಾಗಿದೆ. ಜತೆಗೆ, ಗೋವಾ ಸರ್ಕಾರದ ವಿಶ್ವಾಸ ಗಳಿಸುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಸಂಸದ ಪ್ರಹ್ಲಾದ ಜೋಶಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.
ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೊಂಡಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಹಲವು ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಬಹುದಾಗಿದೆ.
ಜೆನರ್ಮ್ ಯೋಜನೆ: ರಾಜ್ಯದ ಎರಡನೇ ದೊಡ್ಡ ಮಹಾನಗರವಾಗಿರುವ ಹುಬ್ಬಳ್ಳಿ-ಧಾರವಾಡಕ್ಕೆ ಜೆನರ್ಮ್ ಯೋಜನೆ ತರಲು ಸೂಕ್ತ ಪ್ರಯತ್ನ ಮಾಡುವ ಜವಾಬ್ದಾರಿ ಸಂಸದ ಪ್ರಹ್ಲಾದ ಜೋಶಿ ಮೇಲಿದೆ. ಜೆನರ್ಮ್ ಯೋಜನೆ ಅನುಷ್ಠಾನಗೊಂಡಲ್ಲಿ ಅವಳಿ ನಗರದ ಬಹುದಿನಗಳ ಬೇಡೆಕೆಯಾದ ಫ್ಲೈಓವರ್, ರಿಂಗ್ ರೋಡ್ ಸೌಲಭ್ಯಗಳು ಜಾರಿಗೊಳ್ಳಬಹುದು.
ಆನಂದ ಅಂಗಡಿ