ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 20
ಇನ್ನೇನು ಬೇಸಿಗೆ ರಜೆ ಮುಗಿಯುವ ಹಂತಕ್ಕೆ ಬಂದಿದೆ. ಅಜ್ಜ-ಅಜ್ಜಿಯಂದಿರ ಊರುಗಳ ತಿರುಗಾಟ ಮುಗಿಸಿ ಮಕ್ಕಳೂ ಮರಳುತ್ತಿದ್ದಾರೆ. ನಗರದ ಚಿಣ್ಣರ ಬೇಸಿಗೆ ಶಿಬಿರಗಳು ಮುಕ್ತಾಯಗೊಂಡಿವೆ. ಇನ್ನೇನಿದ್ದರೂ ಪಾಲಕರು ಹಾಗೂ ಮಕ್ಕಳು ಪುಸ್ತಕ ಹಾಗೂ ಸಮವಸ್ತ್ರ ಅಂಗಡಿಗಳ ಮುಂದೆ ಸಾಲು ನಿಲ್ಲುವುದೊಂದೆ ಬಾಕಿ.
ಬೇಸಿಗೆ ರಜೆ ಮುಗಿಯುವ ಕಾಲ ಬರುತ್ತಿದ್ದಂತೆ, ಮಾರುಕಟ್ಟೆಯಲ್ಲಿ ಪಾಲಕರು ಹಾಗೂ ಮಕ್ಕಳು ಪುಸ್ತಕದ ಅಂಗಡಿ, ಬಟ್ಟೆ ಅಂಗಡಿ ಎದುರು ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇದುವರೆಗೂ ಬಗೆ ಬಗೆಯ ಮಾವಿನ ಹಣ್ಣುಗಳ ಖರೀದಿಗೆ ಮುಗಿಬೀಳುತ್ತಿದ್ದ ಜನತೆ, ಸದ್ಯ ಪುಸ್ತಕ, ಬಟ್ಟೆಗಳ ಖರೀದಿಯಲ್ಲಿ ನಿರತರಾಗಿದ್ದಾರೆ. ಪುಸ್ತಕ ಮಾರಾಟಗಾರರ ವ್ಯಾಪಾರ ಮಾತ್ರ ಗಗನಕ್ಕೇರಿದೆ.
ಧಾರವಾಡದ ಬಹುತೇಕ ಖಾಸಗಿ ಹಾಗೂ ಅನುದಾನಿತ ಶಾಲೆಗಳು ನಿಗದಿತ ಅಂಗಡಿಗಳಲ್ಲಿ ವಿದ್ಯಾರ್ಥಿಗಳ ಶಾಲಾ ಸಮವಸ್ತ್ರಗಳನ್ನು ಮಾರುವ ವ್ಯವಸ್ಥೆ ನಿರ್ಮಾಣ ಮಾಡಿದ್ದಾರೆ. ಇಲ್ಲಿಯ ಸುಭಾಸ ರಸ್ತೆಯ ವೀರೇಂದ್ರ ಡ್ರೆಸ್ ಲ್ಯಾಂಡ್, ಅಕ್ಕಿ ಪೇಟೆಯ ಕೀರ್ತಿ ಅಂಗಡಿ ಸೇರಿದಂತೆ ಪ್ರತ್ಯೇಕ ಶಾಲೆಯಿಂದ ಪರವಾನಗಿ ಪಡೆದ ಶಾಲಾ ಸಮವಸ್ತ್ರಗಳು ಮಾತ್ರ ಸಿಗುತ್ತಿವೆ. ಇದರಿಂದಾಗಿ ಪಾಲಕರು ಅನಿವಾರ್ಯವಾಗಿ ಅದೇ ಅಂಗಡಿಯಲ್ಲಿ ಬಟ್ಟೆಗಳನ್ನು ಖರೀದಿಸಬೇಕಾಗಿದೆ.
ಶಾಲಾ ಸಮವಸ್ತ್ರ ಮಾರುವ ಆ ಅಂಗಡಿಗಳು ಮಕ್ಕಳು ಹಾಗೂ ಪಾಲಕರಿಂದ ತುಂಬಿ ತುಳುಕುತ್ತಿವೆ. ಬೇರೆ ಬೇರೆ ಅಂಗಡಿಗಳಲ್ಲಿ ಮಕ್ಕಳ ಶಾಲಾ ಸಮವಸ್ತ್ರ ಖರೀದಿಸುವ ಸ್ವಾತಂತ್ರ್ಯವನ್ನು ಶಾಲಾ ಮುಖ್ಯಸ್ಥರು ನೀಡಬೇಕಿತ್ತು. ಒಂದೇ ಅಂಗಡಿಯಲ್ಲಿ ಮಾತ್ರ ಖರೀದಿಸುವುದರಿಂದ ಆ ಅಂಗಡಿ ಮಾಲೀಕರು ಹೇಳಿದ ದರಕ್ಕೆ ಸಮವಸ್ತ್ರ ಖರೀದಿ ಅನಿವಾರ್ಯ ಎಂಬುದು ಪಾಲಕರ ಗೋಳು.
ಸಮವಸ್ತ್ರಗಳ ಗುಣಮಟ್ಟ ಕಡಿಮೆ ಇದ್ದರೂ ಅಂಗಡಿ ಮಾಲೀಕರು ಹೇಳುವ ದರಕ್ಕೆ ಖರೀದಿಸುವ ಅನಿವಾರ್ಯತೆ ಪಾಲಕರದ್ದು. ನಿಗದಿತ ಅಂಗಡಿಯಲ್ಲಿಯೇ ಸಮವಸ್ತ್ರ ಖರೀದಿಸುವಂತೆ ಶಾಲಾ ಮುಖ್ಯಸ್ಥರು ನೀಡುವ ಸೂಚನೆಯ ಹಿಂದೆ ಪರಸ್ಪರ ಒಪ್ಪಂದದ ಶಂಕೆ ಪಾಲಕರದ್ದು. ಸಮವಸ್ತ್ರ ಖರೀದಿಯಿಂದ ವ್ಯಾಪಾರಸ್ಥರಿಗೆ ಬರುವ ಲಾಭದಲ್ಲಿ ಶಾಲಾ ಮುಖ್ಯಸ್ಥರಿಗೂ ಪಾಲು ಇದೆ ಎಂಬ ಆರೋಪ ಪಾಲಕರದ್ದು. ಕೆಲ ಬಾರಿ ಸಮವಸ್ತ್ರ ಖರೀದಿಗೆ ಸಂಬಂಧಿಸಿದಂತೆ ವ್ಯಾಪಾರಸ್ಥರೊಂದಿಗೆ ಜಗಳಗಳಾದ ಪ್ರಸಂಗಗಳು ಸಾಕಷ್ಟಿವೆ. ಇನ್ನು ಶಾಲಾ ಬ್ಯಾಗ್ಗಳ ದರ ಸಹ ಈ ಬಾರಿ ಹೆಚ್ಚಾಗಿದೆ. ಕಳೆದ ಬಾರಿ ರು. 100 ರಿಂದ 200 ರವರೆಗೆ ಇದ್ದ ಬೆಲೆ, ಈ ಬಾರಿ ರು. 200 ರಿಂದ ರು. 300ರಷ್ಟಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಪುಸ್ತಕಗಳನ್ನು ಸರ್ಕಾರ ನೀಡುತ್ತಿದೆ. ಆದರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ತಾವೇ ಪಠ್ಯ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ. ಹಲವೆಡೆ ಪುಸ್ತಕಗಳ ಕೊರತೆಯೂ ಕಂಡು ಬರುತ್ತಿದೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಶಾಲಾ ಪುಸ್ತಕ ಹಾಗೂ ಸಮವಸ್ತ್ರಗಳು ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿವೆ. ಆದರೆ ಬೆಲೆ ಮಾತ್ರ ಆಕಾಶದೆತ್ತರಕ್ಕೇರಿವೆ. ಮಕ್ಕಳು ತಮಗೆ ಬೇಕಾದ ಶಾಲಾ ಪರಿಕರಗಳನ್ನು ಖುಷಿಯಿಂದ ತೆಗೆದುಕೊಳ್ಳುತ್ತಿದ್ದರೆ, ಪಾಲಕರು ಮಾತ್ರ ಜೇಬು ಖಾಲಿ ಮಾಡಿಕೊಂಡು ಹೋಗುವ ಪರಿಸ್ಥಿತಿ ಮಾರುಕಟ್ಟೆಯಲ್ಲಿ ನಿರ್ಮಾಣವಾಗುತ್ತಿದೆ.
-ಹೊನ್ನಪ್ಪ ಲಕ್ಕಮ್ಮನವರ