ರಾಜ್ಯದ ಸೋಯಾ ಬಿತ್ತನೆಗೆ ಯೋಗ್ಯವಲ್ಲ

Updated on: 

-ಹೊನ್ನಪ್ಪ ಲಕ್ಕಮ್ಮನವರ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 23
ಪ್ರಮುಖ ಬೆಳೆಗಳಲ್ಲಿ ಒಂದಾದ ಸೋಯಾಬೀನ ರಾಜ್ಯದಲ್ಲಿ ಬೆಳೆಯಲು ಯೋಗ್ಯವೇ ಹೊರತು ಬೀಜವಾಗಿ ಬಳಸಲು ಅಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಸ್ವತಃ ಕೃಷಿ ಇಲಾಖೆ ಅಧಿಕಾರಿಗಳೇ ಇದನ್ನು ಸ್ಪಷ್ಟಪಡಿಸಿದ್ದು, ರಾಜ್ಯದ ವಾಯುಗುಣವು ಸೋಯಾ ಅವರೆ ಬೆಳೆಯಲು ಮಾತ್ರ ಯೋಗ್ಯವಾಗಿದೆಯೇ ಹೊರತು ಬೀಜವಾಗಿ ಉಪಯೋಗಿಸುವಷ್ಟು ಯೋಗ್ಯ ತಳಿಗಳಾಗಿ ರೂಪಗೊಂಡಿಲ್ಲ. ಆದ್ದರಿಂದ ರಾಜ್ಯದ ರೈತರು ಮಧ್ಯಪ್ರದೇಶದಿಂದ ದಾಸ್ತಾನು ಮಾಡಿಕೊಂಡ ಸೋಯಾಬೀನ ಬೀಜವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ ಎಂಬುದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ. ಗಡಾದ ಅವರ ಹೇಳಿಕೆ.
ರಾಜ್ಯದ ರೈತರಿಗೆಲ್ಲ ಸೋಯಾಬೀನ ಬೀಜವನ್ನು ಸರ್ಕಾರವು ದೂರದ ಮಧ್ಯಪ್ರದೇಶದಿಂದಲೇ ದಾಸ್ತಾನು ಮಾಡಿಕೊಂಡು ವಿತರಿಸುತ್ತಿದೆ. ಮಧ್ಯಪ್ರದೇಶದಿಂದ ದಾಸ್ತಾನಾದ ಬೀಜವನ್ನು ಮಾತ್ರ ರೈತ ಬಳಸಬೇಕು. ಒಂದು ವೇಳೆ ರೈತರು ಸೋಯಾ ಬೆಳೆದು ಮತ್ತೆ ಬೀಜವಾಗಿ ಬಳಸಿದರಾಯ್ತು ಎಂದರೆ ಅದು ಹೆಚ್ಚಿನ ಉತ್ಪನ್ನ ನೀಡುವುದಿಲ್ಲ. ಇದಕ್ಕೆ ರಾಜ್ಯದ ಹವಾಮಾನವೇ ಕಾರಣ ಎನ್ನುವುದು ಅವರ ವಾದ.
ಸ್ಥಳೀಯವಾಗಿ ಬೆಳೆಯುವ ಸೋಯಾಬೀನ ಬೀಜಗಳ ಗಾತ್ರ ದೊಡ್ಡದಾಗಿದ್ದು, ಅದು ಮೇಲಿನಿಂದ ನೆಲಕ್ಕೆ ಬಿದ್ದರೆ ಸಾಕು ಮೊಳಕೆ ಒಡೆಯುವ ಗುಣ ಕಳೆದುಕೊಳ್ಳುತ್ತದೆ. ಗಾತ್ರದಲ್ಲಿ ಚಿಕ್ಕದಾಗಿರುವ ಮಧ್ಯ ಪ್ರದೇಶದ ಸೋಯಾ ಬೀಜದ ಮೊಳಕೆ ಒಡೆಯುವ ಪ್ರಮಾಣ ರಾಜ್ಯದಲ್ಲಿ ಬೆಳೆದ ಬೀಜಕ್ಕಿಂತ ಅಧಿಕವಾಗಿರುತ್ತದೆ. ಕಾರಣ ಪ್ರತಿ ವರ್ಷ ಅಲ್ಲಿಂದಲೇ ಸೋಯಾ ಬೀಜವನ್ನು ತರಿಸಿಕೊಂಡು ಸರ್ಕಾರ ರೈತರಿಗೆ ವಿತರಣೆ ಮಾಡುತ್ತಿದೆ. ಸ್ಥಳೀಯ ಸೋಯಾ ಅವರೆ ಬೀಜಗಳಲ್ಲಿ ಶೇ. 30 ರಿಂದ 40 ರಷ್ಟು ಮೊಳಕೆ ಒಡೆಯುವ ಗುಣವಿದ್ದರೆ, ಮಧ್ಯ ಪ್ರದೇಶದಿಂದ ದಾಸ್ತಾನು ಮಾಡಿಕೊಳ್ಳುವ ಬೀಜದಲ್ಲಿ ಶೇ. 70 ರಿಂದ 80 ರಷ್ಟಿದೆ. ಅಲ್ಲಿಂದಲೇ ಪ್ರಮಾಣಿಕೃತ ಬೀಜ ತರಿಸಿಕೊಳ್ಳುವುದು ವಾಡಿಕೆಯಾಗಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಸ್ಪಷ್ಟನೆ.
ಮಲೆನಾಡು ಹಾಗೂ ಸಾಮಾನ್ಯವಾಗಿ ಮಳೆಯಾಗುವ ಪ್ರದೇಶಗಳಲ್ಲಿ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ರಾಜ್ಯದ ಪೈಕಿ ಧಾರವಾಡ, ಹಾವೇರಿ, ಬೆಳಗಾವಿ, ಗುಲ್ಬರ್ಗಾ, ಬೀದರ ಜಿಲ್ಲೆಗಳಲ್ಲಿ ಈ ಬೆಳೆ ಬೆಳೆಯುತ್ತಿದ್ದು, ರಾಜ್ಯದಲ್ಲಿ 2013-14ನೇ ಸಾಲಿನಲ್ಲಿ 2.47 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತನೆಯಾಗಿ ಒಟ್ಟು 3 ಲಕ್ಷ ಟನ್ ಉತ್ಪಾದನೆಯಾಗಿದೆ ಎಂಬ ಮಾಹಿತಿ ಇದೆ.  
ಜಿಲ್ಲೆಯಲ್ಲಿ ಧಾರವಾಡ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕುಗಳಲ್ಲಿ ಸೋಯಾಬೀನ ಬಿತ್ತನೆ ಕ್ಷೇತ್ರ ಹೆಚ್ಚಾಗಿದೆ. ಅದರಲ್ಲೂ ಕಲಘಟಗಿಯ ರೈತರು ಹೆಚ್ಚಾಗಿ ಸೋಯಾ ನೆಚ್ಚಿಕೊಂಡಿದ್ದಾರೆ. ಇದರಿಂದಾಗಿ ಕೃಷಿ ಇಲಾಖೆಯು ಕಲಘಟಗಿ ತಾಲೂಕಿಗೆ 3531.90 ಕ್ವಿಂಟಲ್ ನಷ್ಟು ಸೋಯಾ ಅವರೆಯನ್ನು ದಾಸ್ತಾನು ಮಾಡಿಕೊಂಡಿದೆ. ಧಾರವಾಡ ತಾಲೂಕಿಗೆ 2423.10 ಕ್ವಿಂಟಲ್, ಹುಬ್ಬಳ್ಳಿ ತಾಲೂಕಿಗೆ 1954.50 ಕ್ವಿಂಟಲ್ ಹಾಗೂ ಕುಂದಗೋಳ ತಾಲೂಕಿಗೆ 351 ಕ್ವಿಂಟಲ್ ದಷ್ಟು ಬೀಜವನ್ನು ಈ ತಾಲೂಕುಗಳ ರೈತರ ಬೇಡಿಕೆ ಪೂರೈಸುವುದಕ್ಕಾಗಿ ಗುಣಮಟ್ಟದ ಸೋಯಾ ಅವರೆ ಬೀಜವನ್ನು ಈಗಾಗಲೇ ಕೃಷಿ ಕೇಂದ್ರ ದಾಸ್ತಾನು ಮಾಡಿಕೊಂಡಿದೆ. ನವಲಗುಂದ ತಾಲೂಕಿನಲ್ಲಿ ಈ ಬೆಳೆಯನ್ನು ಬೆಳೆಯಲು ಪೂರಕವಾದ ವಾತಾವರಣವಿಲ್ಲದ್ದರಿಂದ ಅಲ್ಲಿನ ರೈತರು ಸೋಯಾ ಬೆಳೆ ಬೆಳೆಯುತ್ತಿಲ್ಲ.
ಪ್ರಸ್ತುತ ಕೃಷಿ ವಿಜ್ಞಾನ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದು ರಾಜ್ಯದ ವಾತಾವರಣಕ್ಕೆ ಅನುಕೂಲವಾಗಿ ಬೆಳೆದು ಉತ್ತಮ ಉತ್ಪನ್ನ ನೀಡುವ ಸೋಯಾಬೀನ ತಳಿಯನ್ನು ಕಂಡು ಹಿಡಿಯಬೇಕಾದ ಅಗತ್ಯವಿದೆ. ಈ ಮೂಲಕ ಧಾರವಾಡ ಕೃಷಿ ವಿವಿ ಈ ಪ್ರಯತ್ನ ಮಾಡಬೇಕಿದೆ ಎನ್ನುವುದು ರೈತರ ಅಭಿಪ್ರಾಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com