ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 25
ಮಸೀದಿಗಳ ಮೇಲೆ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ದೇಶದಲ್ಲಿ ಎಲ್ಲ ಧರ್ಮದವರಿಗೆ ಉಪಾಸನೆಯ ಸ್ವಾತಂತ್ರ್ಯವಿದೆ. ಆದರೆ ಈ ಉಪಾಸನೆಯಿಂದ ಇತರರಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಬಾರದು.
ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಶಾಂತನಿದ್ರೆ ಎಂಬುದು ಮೂಲಭೂತ ಅಧಿಕಾರವೆಂದು ಪರಿಗಣಿಸಿ ಶಬ್ದಮಾಲಿನ್ಯ ವಿಷಯದಲ್ಲಿ ಕಟ್ಟು ನಿಟ್ಟಾದ ನಿಯಮ ಜಾರಿಗೊಳಿಸಿದೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ಅವಧಿಯಲ್ಲಿ ಯಾವುದೇ ರೀತಿಯ ಧ್ವನಿವರ್ಧಕದ ಶಬ್ದ ಕೇಳಿಸಬಾರದು ಎಂಬ ಆದೇಶ ನೀಡಿತ್ತು.
ಹೀಗಿದ್ದಾಗಿಯೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಬೆಳಗ್ಗೆ 5 ರಿಂದ 5.30ರ ಸಮಯದಲ್ಲಿ ಮಸೀದಿಯಲ್ಲಿ ಅಜಾನ ನೀಡಲಾಗುತ್ತಿದೆ. ನಾಲ್ಕೂ ದಿಕ್ಕುಗಳಿಗೆ ಮುಖ ಮಾಡಿ ಹಾಕಿರುವ ಧ್ವನಿವರ್ಧಕಗಳಿಂದ ಹೊರಡುವ ದನಿಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.