ಗಜೇಂದ್ರಗಡ: ಸಮೀಪದ ರಾಜೂರು ಗ್ರಾಪಂನಲ್ಲಿ ಕೇಂದ್ರ, ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ನಡೆದಿದೆನ್ನಲಾದ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಿಂದ ಜಿಲ್ಲಾ ವಿವಿಧ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಪ್ರಾರಂಭಿಸಿದರು.
ಗ್ರಾಪಂ ಕಾರ್ಯಾಲಯ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಮತ್ತು ರಾಜೂರು ಕೃಷಿ ಕೂಲಿಕಾರರ ಸಮಿತಿ 3 ದಿನ ಪ್ರತಿಭಟನೆ ನಡೆಸಿದ್ದರ ಪರಿಣಾಮ ಇದಕ್ಕೆ ಮಣಿದಿರುವ ಅಧಿಕಾರಿಗಳು ತನಿಖಾ ತಂಡ ರಚಿಸಿ ಪಂಚಾಯಿತಿಯ ಎಲ್ಲ ಕಡತಗಳನ್ನು ಪರಿಶೀಲಿಸಿದರು. ಜಲಾನಯನ ಇಲಾಖೆ ಹಿರಿಯ ಅಧಿಕಾರಿ ಶಿವನಗೌಡ ಪಾಟೀಲ ನೇತೃತ್ವದಲ್ಲಿ ಪಿಆರ್ಇಡಿ ಟಿ.ಆರ್. ಸುದರ್ಶನ, ಗದಗ ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಪಾಟೀಲ, ಸಹಾಯಕ ಯೋಜನಾ ಅಧಿಕಾರಿ ಡಿ.ವಿ. ಬಂಡಿವಾಡ ಗ್ರಾಪಂ ಕಾರ್ಯಾಲಯದಲ್ಲಿ ಕಡತಗಳನ್ನು ಪರಿಶೀಲಿಸಿದರು.
ಆರೋಪ: ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಮತ್ತು ರಾಜೂರು ಕೃಷಿ ಕೂಲಿಕಾರರ ಸಮಿತಿ ಸದಸ್ಯರು ಸಂಘಟಕರಿಗೆ ಮಾಹಿತಿ ನೀಡದೇ ಆಗಮಿಸಿದ ತಂಡವನ್ನು ತರಾಟೆಗೆ ತೆಗೆದುಕೊಂಡರು. ಸಂಘಟನೆ ಮುಖಂಡ ಬಸವರಾಜ ಶೀಲವಂತರ ಮಾತನಾಡಿ, ತನಿಖೆಗಾಗಿ ಮೂನ್ಸೂಚನೆ ನೀಡದೇ ಹೀಗೆ ಬಂದು ಹೋಗುವುದರಿಂದ ಪ್ರಯೋಜನವಾಗುವುದಿಲ್ಲ. ಇದರಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ. 2010ರಿಂದ ನಡೆದಿರುವ ಭ್ರಷ್ಟಾಚಾರ ಬಗೆಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ತಾವೂ ಆಗಮಿಸುವ ಬಗೆಗೆ ಗ್ರಾಮಸ್ಥರಿಗೆ ತಿಳಿಸಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಗ್ರಾಪಂ ವ್ಯಾಪ್ತಿಯಲ್ಲಿ ಬರುವ 5 ಹಳ್ಳಿಗಳ ಸುತ್ತಲಿನ ಗ್ರಾಮಸ್ಥರಿಗೆ ಮೂಲ ಸೌಕರ್ಯಗಳು ಮತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಾರ್ವಜನಿಕರಿಂದ ಬಹಿರಂಗವಾಗಿ ಹಣವನ್ನು ಕೇಳುತ್ತಿದ್ದಾರೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ಪಿಡಶೆಟ್ಟಿ, ಜಲಾನಯನ ಇಲಾಖೆ ಅಧಿಕಾರಿ ಮೇಟಿ,ನೀರಾವರಿ ಇಲಾಖೆ ಅಧಿಕಾರಿ ಕಟ್ಟಿಮನಿ ಹಾಗೂ ಸಿಪಿಐ (ಎಂ) ಮುಖಂಡ ಎಂ.ಎಸ್. ಹಡಪದ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ತಾಲೂಕು ಕಾರ್ಯದರ್ಶಿ ಕಳಕೇಶ ಉಕ್ಕಿಸಲ, ಬಾಲು ರಾಠೋಡ, ರಾಮಚಂದ್ರ ಹುದ್ದಾರ, ಪೀರು ರಾಠೋಡ, ವಿ.ಬಿ.ಹಪ್ಪಳದ, ಅಮರೇಶ ನೂಲ್ವಿ, ಫಯಾಜ ತೋಟದ, ಬಾಬು ಮುಸಾ ಜಾವರ, ಹನಮಂತ ಹಿತ್ತಲಮನಿ, ಶರಣಪ್ಪ ಸಜ್ಜನರ, ಸುರೇಶ ಮೂಗನೂರ ಇದ್ದರು.