ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 14
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ. ಆದರೆ, ಕೇವಲ ಮುಂಚೂಣಿ ನಾಯಕರನ್ನು ನೆನೆದು, ಇನ್ನುಳಿದವರನ್ನು ಮರೆತು ಬಿಟ್ಟಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಕೇವಲ ಒಂದಿಷ್ಟು ಪಿಂಚಣಿ ನೀಡಿದರೆ ಮುಗಿದು ಹೋಯಿತು ಎನ್ನುವ ಮನೋಭಾವ ಬದಲಾಗಬೇಕು. ದೇಶಕ್ಕಾಗಿ ತಮ್ಮ ಜೀವ ಪಣಕ್ಕಿಟ್ಟು ಗುಂಡು, ಲಾಠಿ ಏಟು ತಿಂದು ಹೋರಾಟಗಾರರಿಗೆ ನೀಡುತ್ತಿರುವ ಬೆಲೆ ಇಷ್ಟೇನಾ? ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ತೋರುವ ಗೌರವ ಇದೇನಾ ಎನ್ನುವ ಸಂಶಯ ಮೂಡುತ್ತಿದೆ.
ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರು ಗ್ರಾಮದ ವೀರಯ್ಯ ಹಿರೇಮಠ, ತಿರುಕಪ್ಪ ಮಡಿವಾಳರ ಹಾಗೂ ಸಹಚರರು ಕಣ್ಮುಂದೆ ಬಂದು ನಿಲ್ಲುತ್ತಾರೆ. ಬ್ರಿಟಿಷರ ನಿದ್ದೆಗೆಡೆಸಿದ್ದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮೈಲಾರ ಮಹಾದೇವಪ್ಪ ಸಹಚರರಾಗಿದ್ದ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಇಬ್ಬರೂ ಶಿರಹಟ್ಟಿ ತಾಲೂಕಿನ ಕೋಗನೂರಿನ ಗ್ರಾಮದವರು.
ಹೊಸರಿತ್ತಿ, ಮೈಲಾರ ಹಾವೇರಿ, ಗುತ್ತಲ, ಮುಂಡರಗಿ ಮೊದಲಾದ ಪಂಚಾಯಿತಿಗಳ ಖಜಾನೆಯನ್ನು ಲೂಟಿ ಮಾಡಿ, ಅಲ್ಲಿ ಸಿಕ್ಕ ಹಣವನ್ನು ಬಡ-ಬಗ್ಗರಿಗೆ ಹಂಚುತ್ತಿದ್ದರು. ಹೀಗೆ ಹೋರಾಟ ಮಾಡುತ್ತ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಹೊಸರಿತ್ತಿಯ ಬ್ರಿಟಿಷರ ಕಂದಾಯದ ಹಣ ಲೂಟಿ ಮಾಡುವ ಸಂದರ್ಭದಲ್ಲಿ 1943ರ ಏಪ್ರಿಲ್ 1ರಂದು ಹೊಸರಿತ್ತಿ ಗ್ರಾಮದಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾಗುತ್ತಾರೆ. ಇವರ ಜತೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೋಗನೂರಿನ ಗೋಣೆಪ್ಪ ಕಮತ ಕೂಡಾ ಒಬ್ಬರು. ಇವರು ಬ್ರಿಟಿಷರು ಗುಂಡು ಹಾರಿಸುವ ಸಂದರ್ಭದಲ್ಲಿ ಬಂದೂಕಿನ ನಳಕೆಯನ್ನು ಹಿಡಿದು ಹೋರಾಟ ಮಾಡುತ್ತಿರುವಾಗ ಇವರ ಬಲಗೈನ ಬೆರಳುಗಳು ತುಂಡಾಗಿ ಹೋಗಿದ್ದವು ಎಂದು ಗ್ರಾಮಸ್ಥರು ಹೇಳುತ್ತಾರೆ. ಇವರ ಸಮಾಧಿ ಈಗ ಕೋಗನೂರಿನ ಚರಂಡಿಯ ಮೇಲೆ ನಿರ್ಮಿತವಾಗಿರುವುದು ನೋವಿನ ಸಂಗತಿಯಲ್ಲದೆ ಮತ್ತಿನೇನು?
ಪಠ್ಯದಲ್ಲಿ ಅಳವಡಿಸಿ: ಮೈಲಾರ ಮಹದೇವಪ್ಪನವರ ಬಗ್ಗೆ ಸಾಕಷ್ಟು ಕಥೆಗಳು, ಪಠ್ಯ ಪುಸ್ತಕದಲ್ಲಿ ಅವರ ಜೀವನ ಚರಿತ್ರೆಯನ್ನು ನಾವು ತಿಳಿದುಕೊಳ್ಳುತ್ತೇವೆ. ಆದರೆ, ಕೋಗನೂರಿನ ಹುತಾತ್ಮರಾದ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠರ ಜೀವನ ಚರಿತ್ರೆಯನ್ನು ಯಾವ ಪಠ್ಯ ಪುಸ್ತಕದಲ್ಲಿ ಅಳವಡಿಸಿಲ್ಲ. ಆ ಹೋರಾಟಗಾರರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು. ಕೋಗನೂರಿನ ಹೋರಾಟಗಾರರ ಕುರಿತು ಸಂಶೋಧನೆ ನಡೆಸುವಲ್ಲಿ ಯಾವುದಾದರೂ ವಿಶ್ವವಿದ್ಯಾಲಯಗಳು ಮುಂದು ಬರಬೇಕಿದೆ.
ಸ್ವಾತಂತ್ರ್ಯದ ಕಿಚ್ಚು ಹಚ್ಚಿದವರು: ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಗಾಂಧೀಜಿಯವರು ನೀಡಿದ ಕರೆಗೆ ಓಗೊಟ್ಟು ಚಳವಳಿಯಲ್ಲಿ ಧುಮುಕಿದ ಸಾಕಷ್ಟು ಜನರು ಬ್ರಿಟಿಷರ ಕಾಟಕ್ಕೆ ಹೆದರಿ ತೆರೆ ಮರೆಯಲ್ಲಿ ಹೋರಾಟ ಮಾಡುತ್ತಿದ್ದರು. ಆದರೆ, ಕೋಗನೂರಿನ ಗೋಣೆಪ್ಪ ಕಮತ, ಯಲ್ಲವ್ವ ಕಮತ, ಚನ್ನಪ್ಪ ಕೊರಗುಂದ, ನಿಂಗಪ್ಪ ಕೊರಗುಂದ, ನಿಶೀಮಪ್ಪ ಚನ್ನೂರ, ವೀರಭದ್ರಪ್ಪ ಪಾಟೀಲ, ವೀರಭದ್ರಪ್ಪ ಅಂಗಡಿ, ಗುಡ್ಡಪ್ಪ ದೇವಪ್ಪನವರ, ಭಗವಂತಪ್ಪ ಬೂದನೂರ ಹಲವು ಜನ ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದವರು.
ಕೊನೆಯಲ್ಲಿ ಅದೇ ಬೆಂಕಿಯಲ್ಲಿ ತಮ್ಮನ್ನೇ ತಾವು ಸುಟ್ಟುಕೊಂಡು ಬೂದಿಯಾಗಿ ದೇಶಕ್ಕೆ ಸ್ವಾತಂತ್ರ್ಯದ ಕುಸುಮವನ್ನು ತೊಡಿಸಿದವರು ಈ ಹೋರಾಟಗಾರರು. ಇಂತಹವರ ಸ್ಮರಣೆಯನ್ನು ಆಗಸ್ಟ್ 15ಕ್ಕೆ ಒಂದು ಹೂಮಾಲೆ ಹಾಕಿ ಕೈ ಮುಗಿದರೆ ಸಾಕೇ?. ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ನಮ್ಮ ಜನ ಮಾನಸದೊಳಿಗಿನ ನಮ್ಮವರ ತ್ಯಾಗ ಬಲಿದಾನಗಳನ್ನು ನೆನೆಯುವ ಕಾರ್ಯದೊಂದಿಗೆ ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯವಾಗಬೇಕು. ಈ ಕಾರ್ಯವನ್ನು ಇದುವರೆಗೂ ಯಾವ ಸರ್ಕಾರಗಳು ಜನಪ್ರತಿನಿಧಿಗಳು ಮಾಡಿಲ್ಲ.
-ಅಶೋಕ ಸೊರಟೂರ
Advertisement