ಶ್ರೀಗಂಧ ಮರಗಳ ಮಾರಣ ಹೋಮ

Updated on: 

ಕನ್ನಡಪ್ರಭ ವಾರ್ತೆ, ಗದಗ, ಫೆ. 1
ಜಿಲ್ಲೆಯಲ್ಲಿ 2ನೇ ದರ್ಜೆಯ ಶ್ರೀಗಂಧದ ಮರಗಳ ಮಾರಣ ಹೋಮ ಅವ್ಯಾಹತವಾಗಿ ನಡೆಯುತ್ತಿದೆ.
ಬರದ ನಾಡಿನ ಐಶ್ವರ್ಯವೆಂದೇ ಕರೆಯಲ್ಪಡುವ ಈ ಶ್ರೀಗಂಧದ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇವುಗಳ ರಕ್ಷಣೆ ಮಾಡಬೇಕಾದ ಸಾಮಾಜಿಕ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಇಂದು ಈ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ.
ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಸುತ್ತಮುತ್ತಲು, ನರೇಗಲ್ಲ ಹೋಬಳಿ, ರೋಣ ಹೋಬಳಿ ಗದಗ ತಾಲೂಕಿನ ಬೆಟಗೇರಿ ಹೋಬಳಿ, ಹುಲಕೋಟಿ ಹೋಬಳಿ ಹಾಗೂ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡ ಭಾಗದಲ್ಲಿಯೂ ಈ ಕಳ್ಳ ದಂಧೆ ವ್ಯಾಪಿಸಿದೆ.
ರಾತ್ರಿಯಾಗುತ್ತಿದ್ದಂತೆ ಮರಗಳ್ಳರ ದೊಡ್ಡ ತಂಡವೇ ಕಾರ್ಯಾಚರಣೆಗೆ ಇಳಿಯುತ್ತಿದ್ದು, ಕಡಿದ ಮರವನ್ನು ಅಂದೇ ಅಲ್ಲಿಂದ ಬೇರೆಡೆ ಸಾಗಿಸಲು ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡೇ ಮರಗಳ್ಳರು ಈ ಕಾರ್ಯಕ್ಕೆ ಮುಂದಾಗುತ್ತಾರೆ.
ಏನಿದು 2ನೇ ದರ್ಜೆ ಶ್ರೀಗಂಧ: ನಮ್ಮ ರಾಜ್ಯದ ಅಭಯಾರಣ್ಯಗಳಲ್ಲಿ ಲಭ್ಯವಾಗುವ ಶ್ರೀಗಂಧವು ಉತ್ತಮ ಗುಣಮಟ್ಟ ಹೊಂದಿದ್ದು, ಅದು ಗದಗ ಜಿಲ್ಲೆಯಂತಹ ಬಯಲು ಪ್ರದೇಶದಲ್ಲಿ ಬೆಳೆಯುವುದಿಲ್ಲ. ಅದೇ ಮಾದರಿಯ ಅದಕ್ಕಿಂತ ಅಲ್ಪ ಕಡಿಮೆ ಸುಗಂಧವನ್ನು ಹೊಂದಿರುವ ಶ್ರೀಗಂಧದ ಮರಗಳು ಜಿಲ್ಲೆಯಲ್ಲಿ ಸಾಕಷ್ಟು ಬೆಳೆಯುತ್ತವೆ. ಈ ಶ್ರೀಗಂಧವು ಮುಖ್ಯವಾಗಿ ಹಳ್ಳಗಳ ಇಕ್ಕೆಲಗಳಲ್ಲಿ (ದಂಡೆಗಳಲ್ಲಿ) ಮುಳ್ಳು ಕಂಟಿಗಳ ಮಧ್ಯೆಯೇ ಹೆಚ್ಚಾಗಿ ಬೆಳೆಯುತ್ತದೆ ಹಾಗಾಗಿ ಇದರ ಕಳ್ಳದಂಧೆ ಇಂದಿಗೂ ಆಚೆ ಬರದೇ ಎಗ್ಗಿಲ್ಲದೇ ನಡೆಯುತ್ತಿದೆ.
ಹೊರ ರಾಜ್ಯಕ್ಕೆ ಸಾಗಾಟ: ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಅಕ್ರಮ ದಂಧೆಯಿಂದ ಸಂಗ್ರಹವಾದ ಶ್ರೀಗಂಧವನ್ನು ಪಕ್ಕದ ಗೋವಾ ರಾಜ್ಯಕ್ಕೆ ರವಾನಿಸಲಾಗುತ್ತಿದೆ. ಒಮ್ಮೆಲೆ ಕಟ್ಟಿಗೆ ಸಾಗಿಸಿದರೆ ಸಿಕ್ಕಿ ಬೀಳುವ ಭಯದಿಂದ 10 ಕೆಜಿಯಿಂದ ಪ್ರಾರಂಭವಾಗಿ 25 ಕೆಜಿವರೆಗೆ ಮಾತ್ರ ಶ್ರೀಗಂಧವನ್ನು ಸಾಗಿಸುತ್ತಿದ್ದಾರೆ. ಇದಕ್ಕೆ ಅವರು ಬಳಕೆ ಮಾಡಿಕೊಳ್ಳುತ್ತಿರುವುದು ರೇಲ್ವೆಗಳನ್ನು, ತಡರಾತ್ರಿಯ ವೇಳೆಯಲ್ಲಿ ಸಣ್ಣ ಸಣ್ಣ ಚೀಲಗಳಲ್ಲಿ ಸಾಗಾಟವಾಗುತ್ತಿದೆ ಎನ್ನಲಾಗಿದೆ.
ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಮರವನ್ನು ಕಡಿಯುವವರೇ ಬೇರೆ, ಅದನ್ನು ಮತ್ತೊಬ್ಬರು ಖರೀದಿಸಿ, ಸಣ್ಣ ತುಂಡುಗಳಾಗಿ ಮಾಡಿ, ಪ್ಯಾಕ್ ಮಾಡುತ್ತಾರೆ. ನಂತರ ಅದನ್ನು ಬೇರೆ ರಾಜ್ಯಗಳಿಂದ ಬರುವ ವ್ಯಾಪಾರಿಗಳು ಖರೀದಿಸಿಕೊಂಡು ಹೋಗುವ ಜಾಲ ಕೆಲಸ ಮಾಡುತ್ತಿದೆ.
ಶೀಗಂಧಕ್ಕೆ ಉತ್ತಮ ಬೆಲೆ: ಈ ಶ್ರೀಗಂಧಕ್ಕೂ ಉತ್ತಮ ಬೆಲೆ ಇದ್ದು, ಪ್ರತಿ ಕೆಜಿ ಶ್ರೀಗಂಧವು ರು. 700-2000 ದವರೆಗೆ ಮಾರಾಟವಾಗುತ್ತಿದೆ. ಹಲವಾರು ಸೌಂದರ್ಯವರ್ಧಕ ಕಂಪನಿಗಳು ಈ ಶ್ರೀಗಂಧವನ್ನು ಖರೀದಿ ಮಾಡುತ್ತವೆ ಎಂದು ಹೇಳಲಾಗುತ್ತಿದ್ದು, ಆದರೆ ಅದು ಎಲ್ಲಿ, ಹೇಗೆ ಮಾರಾಟವಾಗುತ್ತದೆ ಎನ್ನುವ ಬಗ್ಗೆ ಮಾತ್ರ ಸುಳಿವು ಸಿಗುತ್ತಿಲ್ಲ. ಬರದ ಜಿಲ್ಲೆಯಂದೇ ಹೆಸರಾಗಿರುವ ಗದಗ ಜಿಲ್ಲೆಯಲ್ಲಿ ಇರೋ ಬರೋ ಉತ್ತಮ ಮರಗಳು ಇಂದು ಮರಗಳ್ಳರ ಪಾಲಾಗುತ್ತಿದ್ದು, ಪರಿಸರ ಪ್ರೇಮಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.



ಕೇವಲ ಹಳ್ಳದ ಪಕ್ಕದಲ್ಲಿ ಮಾತ್ರವಲ್ಲ. ಹಲವಾರು ಹೊಲಗಳ ಬದುವಿನಲ್ಲಿಯೇ ಈ ಮರ ಬೆಳೆಯುತ್ತದೆ. ಕಳ್ಳರು ಒಂದೊಮ್ಮೆ ಮರ ಬೆಳೆದದ್ದನ್ನು ನೋಡಿದರೆ ಮುಗಿಯಿತು. 4-5 ದಿನದಲ್ಲೇ ಅದನ್ನು ಕಡಿದುಕೊಂಡು ಹೋಗುತ್ತಾರೆ. ನಾವು ಯಾರನ್ನು ಪ್ರಶ್ನೆ ಮಾಡುವುದು. ಈ ಬಗ್ಗೆ ಅರಣ್ಯ ಇಲಾಖೆ ಕೂಡಲೇ ಗಮನ ಹರಿಸಬೇಕು.
ಟ ನಾಗಪ್ಪ ಬೇವಿನಕಟ್ಟಿ, ಗ್ರಾಮಸ್ಥ
ಈ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಇಂತಹ ಅಪರಾಧ ಕೃತ್ಯಗಳು ಸಾರ್ವಜನಿಕರ ಗಮನಕ್ಕೆ ಬಂದಾಕ್ಷಣ ನಮಗೂ ತಿಳಿಸುತ್ತಿಲ್ಲ. ಈ ವಿಷಯವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣದಿಂದಲೇ ವಿಶೇಷ ಪಹರೆಯನ್ನು ಹಾಕಲಾಗುವುದು. ಅಗತ್ಯಬಿದ್ದಲ್ಲಿ ಪೊಲೀಸ್ ಇಲಾಖೆಯ ಸಹಕಾರವನ್ನು ಪಡೆಯಲಾಗುವುದು.
ಟ ಎನ್.ಎಚ್. ಅಘೋರೆ, ಜಿಲ್ಲಾ ಅರಣ್ಯ ಅಧಿಕಾರಿ, ಗದಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com