ಗದಗ ಹಬ್ಬಕ್ಕೆ ಇಂದು ಚಾಲನೆ

Updated on: 

ಗದಗ: ನಗರದಲ್ಲಿ 35 ದಿನಗಳ ಕಾಲ ನಡೆಯಲಿರುವ ಕ್ರೀಡಾ ಹಾಗೂ ಸಾಂಸ್ಕೃತಿಕ ಹಬ್ಬಕ್ಕೆ ಫೆ. 3ರಂದು ಮಾಜಿ ಸಚಿವ, ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ಚಾಲನೆ ನೀಡಲಿದ್ದಾರೆಂದು ಗದಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಕಾಡೆಮಿ ಅಧ್ಯಕ್ಷ, ಬಿಎಸ್‌ಆರ್ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ಅವರು ಶನಿವಾರ ನಗರದ ಸಂಭಾಪುರ ರಸ್ತೆಯ ಹೊರವಲಯದಲ್ಲಿ ನಿರ್ಮಿಸಲಾಗಿರುವ ಜಿಸಿಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಾನ್ನಿಧ್ಯವನ್ನು ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಸೊರಟೂರ ಹಿರೇಮಠ ಶ್ರೀಗಳು ವಹಿಸುವರು. ಸಮಾರಂಭದ ಮುಖ್ಯ ಆಕರ್ಷಣೆಯಾಗಿ ಚಲನಚಿತ್ರ ನಟ ಶ್ರೀನಗರ ಕಿಟ್ಟಿ, ನಟಿ ಐಂದ್ರಿತಾ ರೈ ಸೇರಿದಂತೆ ಚಲನಚಿತ್ರ ರಂಗದ ಹಲವಾರು ಕಲಾವಿದರು ಪಾಲ್ಗೊಳ್ಳುವರು. ಚೆನೈನಿಂದ ಆಗಮಿಸಿರುವ ವಿಶೇಷ ತಂಡ ವೇದಿಕೆ ಸಿದ್ಧತೆಯಲ್ಲಿ ತೊಡಗಿದ್ದರು. ಕ್ರೀಡಾಂಗಣವು ನಗರದ ಹೊರವಲಯದಲ್ಲಿದ್ದರೂ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯತೆ ಇಲ್ಲ. 150 ಜನ ಆರಕ್ಷಕ ಸಿಬ್ಬಂದಿ ಸೇರಿದಂತೆ 100 ಜನರ ತಂಡವನ್ನು ಹೊಂದಿರುವ ಖಾಸಗಿ ಭದ್ರತಾ ಸಿಬ್ಬಂದಿಯ ವ್ಯವಸ್ಥೆ ಮಾಡಲಾಗಿದೆ. ಅಂತರ್ ರಾಷ್ಟ್ರೀಯ ಪಂದ್ಯಗಳ ಮಾದರಿಯಲ್ಲಿಯೇ ನಿರ್ಮಿಸಲಾಗಿರುವ ಕ್ರೀಡಾಂಗಣದಲ್ಲಿ ಫೆ. 9 ರಿಂದ ಕ್ರಿಕೆಟ್ ಪಂದ್ಯಗಳು ಜರುಗಲಿದ್ದು, ಪ್ರತಿ ದಿನ 4 ಪಂದ್ಯಗಳು ನಡೆಯಲಿವೆ.
ಇದರೊಟ್ಟಿಗೆ ಖೋಖೋ ಹಾಗೂ ಇನ್ನಿತರ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗುವುದು. ಬೆಟಗೇರಿ ಗಾಂಧಿ ನಗರ ಕ್ರೀಡಾಂಗಣದಲ್ಲಿ ಪುಟ್‌ಬಾಲ್ ಹಾಗೂ ಹಾಕಿ ಪಂದ್ಯಾವಳಿ ಜರುಗಲಿವೆ. ಉದ್ಘಾಟನಾ ಸಮಾರಂಭದಲ್ಲಿ 30 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. ವೆಂಕಟೇಶ ದಾಸರ, ಸತೀಶ ಮುದಗಲ್ಲ, ಐ.ಜೆ. ಅಬ್ಬಿಗೇರಿ, ಆಸಿಪ್ ಬೆಳಗಾವಿ, ವೈ.ಕೆ.ಚೌಡಾಪುರ, ಬಸವರಾಜ ಕೋಟಿ, ಬಾಬಾಜಾನ ಬಳಗಾನೂರ, ಸಿದ್ಲಿಗೇಂಶ ಮೆಣಸಿನಕಾಯಿ, ರವಿ ಲಕ್ಕುಂಡಿ, ಬಸವಣ್ಣೆಯ್ಯ ಹಿರೇಮಠ. ಮುಂತಾದವರು ಹಾಜರಿದ್ದರು.
ರಷ್ಯನ್ ಕಲಾವಿದರಿಂದ ಕಾರ್ಯಕ್ರಮ: ಜಿಸಿಎಲ್ ಗದಗ ಹಬ್ಬ ಕಾರ್ಯಕ್ರಮಕ್ಕೆ ಈ ಬಾರಿ ಹೆಚ್ಚಿನ ಮೆರಗು ಬರುವ ನಿಟ್ಟಿನಲ್ಲಿ ರಷ್ಯನ್ ಕಲಾ ತಂಡ ಪಾಲ್ಗೊಳ್ಳುತ್ತಿದೆ. ಹಲವಾರು ವಿಶೇಷತೆಗಳನ್ನು ಹೊಂದಿರುವ ಪ್ರದರ್ಶನ ನೀಡಲಿದ್ದಾರೆ. ಅದರಲ್ಲಿಯೂ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ರಷ್ಯಾದ ವಿಶೇಷ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರೊಟ್ಟಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಶಿಷ್ಯ ಬಳಗದಿಂದ ಹಲವಾರು ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶಾಪಿಂಗ್ ಕಮಾಲ್: ಈ ಬಾರಿಯ ಗದಗ ಹಬ್ಬ ಕಾರ್ಯಕ್ರಮದಲ್ಲಿ ಉತ್ತರ ಭಾರತೀಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ವಿಶೇಷ ಶಾಪಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದು 15 ದಿನಗಳ ಕಾಲ ನಡೆಯಲಿದೆ. ಇದರೊಟ್ಟಿಗೆ ಮಹಿಳೆಯರಿಗಾಗಿ ಮಹಿಳಾ ಹಬ್ಬ, ನಮ್ಮೂರ ಅದೃಷ್ಟ ಲಕ್ಷ್ಮಿ, ಆದರ್ಶ ದಂಪತಿ, ಮಿಸ್ ಗದಗ, ಮಿಸ್ಟರ್ ಗದಗ ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com