ಗದಗ: ಮಾನವೀಯ ಮೌಲ್ಯಗಳು ಇಂದು ಧಾರ್ಮಿಕ, ಸಾಮಾಜಿಕ, ಕೌಟುಂಬಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಕುಸಿಯುತ್ತಿದ್ದು, ಇದು ಆತಂಕದ ವಿಷಯವಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ. ಪಾಟೀಲ್ ಹೇಳಿದರು.
ಅವರು ಶನಿವಾರ ಗದಗ ನಗರದ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಪ್ರಾಚೀನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಯುವ ಸಮಾಜ ನಿರ್ವಹಿಸಬೇಕಿದೆ. ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಪ್ರಮುಖರು, ರಾಜಕೀಯ ನಾಯಕರುಗಳಿಗೆ ಮಾರ್ಗದರ್ಶನ ನೀಡಿ, ದೇಶದ ರಾಜಕೀಯ ವ್ಯವಸ್ಥೆಯನ್ನು ಸುಗಮವಾಗಿ ಸಾಗಿಸಲು ಸಹಕರಿಸಬೇಕಿದೆ. ದೇಶದ ರಾಜಕೀಯ ವ್ಯವಸ್ಥೆ ಗಂಡಾಂತರದಲ್ಲಿದೆ ಎಂದು ತಪ್ಪಾಗಲಾರದು. ಸಮಸ್ಯೆಗಳು ನಿರಂತರವಾಗಿವೆ.
ರಾಜಕೀಯ ಕ್ಷೇತ್ರದಲ್ಲಿ ಇಂದು ಕಂಡುಬರುತ್ತಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮಹಿಳಾ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ನೇರವಾಗಿ ಪ್ರಶ್ನಿಸುವ ಗಟ್ಟಿತನ ಯುವ ಪೀಳಿಗೆ ಬೆಳೆಸಿಕೊಳ್ಳಬೇಕಿದೆ. ಸಮಾಜದಲ್ಲಿ ಉತ್ತಮ ವ್ಯವಸ್ಥೆ ಹೊಂದಲು ಯುವಶಕ್ತಿ ಗಮನ ನೀಡಬೇಕಿದೆ. ಇತ್ತೀಚಿನ ಕೆಲ ಘಟನೆಗಳಿಂದ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಾಗಿದೆ. ಪ್ರತಿಭಟಿಸುವ ಶಕ್ತಿಯನ್ನು ಯುವ ಪೀಳಿಗೆ ದಿನೇ ದಿನೇ ಕಳೆದುಕೊಳ್ಳುತ್ತಿದೆ. ವ್ಯವಸ್ಥೆಯ ಮಧ್ಯೆ ಕಂದಕ ಹೆಚ್ಚಾಗುತ್ತಲೇ ಹೋಗುತ್ತಿದೆ. ನಿರಂತರ ಹೋರಾಟ ಗುಣ ಬೆಳೆಸಿಕೊಂಡು ಬದುಕಿನಲ್ಲಿ ವಿವೇಕಾನಂದರ ಸಂದೇಶಗಳನ್ನು ಅಳವಡಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಿರ್ಲೋಸ್ಕರ್ ಕಂಪನಿಯ ವ್ಯವಸ್ಥಾಪಕ ರವಿ ಗುಮಾಸ್ತೆ ಮಾತನಾಡಿ, ವಿವೇಕಾನಂದರ ಆದರ್ಶಗಳು, ಯುವ ಪೀಳಿಗೆಗೆ ಮಾದರಿಯಾಗಿವೆ. ಅವುಗಳನ್ನೆಲ್ಲಾ ಮರೆತು, ವಿದೇಶಿ ಸಂಸ್ಕೃತಿ ಅಂಧಾನುಕರಣೆಯಲ್ಲಿ ನಮ್ಮ ಯುವ ಜನಾಂಗ ತೊಡಗಿರುವುದೇ ಇಂದು ಹಲವಾರು ಸಮಸ್ಯೆಗಳು ಸೃಷ್ಟಿಯಾಗಲು ಕಾರಣವಾಗಿದೆ ಎಂದರು. ಗದಗ, ಬಿಜಾಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹುಬ್ಬಳ್ಳಿಯ ರಾಮಕೃಷ್ಣ ಆಶ್ರಮದ ರಘುವೀರಾನಂದಜಿ ಶ್ರೀಗಳಿಂದ ಪ್ರಾರ್ಥನೆ ಜರುಗಿತು. ಎಪಿಎಂಸಿ ಉಪಾಧ್ಯಕ್ಷ ಸಿದ್ದಲಿಂಗೇಶ ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಪ್ರೊ. ಕೆ.ಎಚ್. ಬೇಲೂರ, ಪ್ರಾಚಾರ್ಯ ಎಂ.ಎಲ್. ಗುಳೇದಗುಡ್ಡ, ಎಸ್.ಎಸ್. ಯಂಕಂಚಿ, ಪಿ.ಜಿ. ಹಿರೇಮಠ ಪಾಲ್ಗೊಂಡಿದ್ದರು. ಪ್ರಾಚಾರ್ಯ ಟಿ.ವಿ. ಮಾಗಳದ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಶ್ರೀನಿವಾಸ ಹುಯಿಲಗೋಳ ವಂದಿಸಿದರು. ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.