ಗದಗ: ಬಿಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಗದಗ ನಗರದಲ್ಲಿ ಕ್ರೀಡಾ ವಿವಿ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ಹೇಳಿದರು. ಅವರು ಭಾನುವಾರ ರಾತ್ರಿ ಗದಗ ನಗರದ ಸಂಭಾಪುರ ರಸ್ತೆಯಲ್ಲಿರುವ ಅಬ್ಬಿಗೇರಿ ಕ್ರೀಡಾಂಗಣದಲ್ಲಿ ಗದಗ ಸ್ಪೋಟ್ಸ್ ಮತ್ತು ಕಲ್ಚರಲ್ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ಗದಗ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗದಗ, ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ಕ್ಷೇತ್ರವಾಗಿದ್ದು, ಇದನ್ನು ಇನ್ನಷ್ಟು ಬೆಳೆಸುವ ರೀತಿಯಲ್ಲಿ ಅನಿಲ ಮೆಣಸಿನಕಾಯಿ ನಡೆಸುತ್ತಿರುವ ಕಾರ್ಯಕ್ರಮ ನಿಜವಾಗಿಯೂ ಶ್ಲಾಘನೀಯವಾಗಿದೆ. ಮುಂಬರುವ ದಿನಗಳಲ್ಲಿ ಗದಗ, ಬೆಟಗೇರಿ ಅವಳಿ ನಗರಕ್ಕೆ ಅನಿಲ ಮೆಣಸಿನಕಾಯಿ ಅವರ ಸೇವೆ ಅತ್ಯಂತ ಅವಶ್ಯ ಎಂದರು. ಅಕಾಡೆಮಿಯ ಅಧ್ಯಕ್ಷ ಅನಿಲ ಮೆಣಸಿನಕಾಯಿ ಪ್ರಾಸ್ತಾವಿಕ ಮಾತನಾಡಿ, ಅಕಾಡೆಮಿ ರೂಪುರೇಷೆ ಹಾಗೂ ವ್ಯವಸ್ಥೆಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟರಾದ ಶ್ರೀನಗರ ಕಿಟ್ಟಿ, ಐಂದ್ರಿತಾ ರೈ, ಹರ್ಷಿಕಾ ಪೊಣ್ಣಚ್ಚ, ಗೌರಿಶಂಕರ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಬಲೂನ್ ಮೂಲಕ ವೇದಿಕೆಗೆ ಆಗಮಿಸಿದ ಯುವತಿ ಶ್ರೀರಾಮುಲು ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಗಮನ ಸೆಳೆದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಸಿದ್ದು ಯಾಪಲಪರವಿ ಮಾತನಾಡಿದರು. ನಂತರ ಹಲವಾರು ಸಂಗೀತ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮ ಪೂರ್ವದಲ್ಲಿ ಅದ್ಧೂರಿ ಮೆರವಣಿಗೆ ಕಾರ್ಯಕ್ರಮದಲ್ಲಿ ಅವಳಿ ನಗರದ ಹಲವಾರು ಯುವಕರು ಪಾಲ್ಗೊಂಡಿದ್ದರು.