ಸಾರಿಗೆ ನಿಗಮ: 6ರಂದು ಸಭೆ

Updated on: 

ಕನ್ನಡಪ್ರಭ ವಾರ್ತೆ, ರೋಣ. ಫೆ. 3
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಗೆ ಬರುವ ಎಲ್ಲ 8 ವಿಭಾಗಾಧಿಕಾರಿಗಳ ಸಭೆಯನ್ನು ಫೆ. 6ರಂದು ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಕರೆಯಲಾಗಿದ್ದು, ಈ ಸಭೆಯಲ್ಲಿ ನಂಜುಂಡಪ್ಪ ವರದಿ ಅನುಷ್ಠಾನದ ಪ್ರಗತಿ ಕುರಿತು ಚರ್ಚಿಸಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಹೇಳಿದರು.
ಅವರು ಭಾನುವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಗದಗ ವಿಭಾಗ ಸೇರಿ 7 ವಿಭಾಗಗಳು ಸ್ವಲ್ಪ ಮಟ್ಟಿಗೆ ನಷ್ಟದಲ್ಲಿವೆ. ಅವುಗಳನ್ನು ಮುಂಬರುವ ದಿನಗಳಲ್ಲಿ ಲಾಭದತ್ತ ಕೊಂಡೊಯ್ಯಲು ಅನೇಕ ಕ್ರಮಗಳನ್ನು ರೂಪಿಸಲಾಗಿದೆ. ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಸಾರಿಗೆ ಸಂಸ್ಥೆಗೆ ನಂಜುಂಡಪ್ಪ ವರದಿಯ ಯೋಜನೆಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ಎನ್ನುವ ಪ್ರಶ್ನೆಗೆ, ನಾನು ಜ.18ರಂದು ಅಧಿಕಾರ ವಹಿಸಿಕೊಂಡಿದ್ದೇನೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ತಿಳಿಸುತ್ತೇನೆ ಎಂದರು.
ಗದಗ ಜಿಲ್ಲೆಯ ಮುಂಡರಗಿ, ರೋಣ, ಶಿರಹಟ್ಟಿ, ಹಿರೇವಡ್ಡಟ್ಟಿ, ಗಜೇಂದ್ರಗಡದಲ್ಲಿ ನಂಜುಂಡಪ್ಪ ವರದಿ ಯೋಜನೆಯಲ್ಲಿ ವಿವಿಧ ಕಾಮಗಾರಿಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು. ರೋಣ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಬಸ್ ನಿಲ್ದಾಣವನ್ನು ಫೆ. 15 ರೊಳಗಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಸದ್ಯದಲ್ಲಿಯೇ ಬಸ್ ನಿಲ್ದಾಣ ಉದ್ಘಾಟನೆಗೊಳ್ಳಲಿದೆ. ರೋಣದಲ್ಲಿ ಬಸ್ ನಿಲ್ದಾಣ ಇಲ್ಲದಿರುವುದರಿಂದ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದು ವರ್ಷದಿಂದ ಸಂಸ್ಥೆಗೆ ಆದಾಯ ಕಡಿಮೆಯಾಗಿದ್ದು, ಕೂಡಲೇ ಆದಾಯ ಹೆಚ್ಚಿಸುವಲ್ಲಿ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಗುರುರಾಜ ಕುಲಕರ್ಣಿ, ಬಿಜೆಪಿ ತಾಲೂಕಾಧ್ಯಕ್ಷ ಡಾ. ಆನಂದ ಇನಾಮದಾರ, ಪುರಸಭೆ ಸದಸ್ಯ ಮುತ್ತಣ್ಣ ಲಿಂಗನಗೌಡರ, ಸಂಗಣ್ಣ ಮುದಗಲ್ಲ, ಅರ್ಜುನ ಕೊಪ್ಪಳ, ಶಿವಾನಂದ ಜಿಡ್ಡಿಬಾಗಿಲ, ಬಸನಗೌಡ ರಂಗನಗೌಡರ, ಶ್ರೀಧರ ದಲಬಂಜನ, ಕಳಕಪ್ಪ ಸಂತೋಜಿ, ಕೃಷ್ಣಪ್ಪ ಬೇವಿನಮರದ ಉಪಸ್ಥಿತರಿದ್ದರು.

ಸಿಕ್ಸರ್ ಬಾರಿಸುವೆ
ಸಂಸ್ಥೆಗೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದು ಈಗಷ್ಟೇ. ಹಾಗಾಗಿ ಇತ್ತೀಚಿನ ಟಿ 20 ಕ್ರಿಕೆಟ್ ಮಾದರಿಯಲ್ಲಿ ನನಗೆ ಬ್ಯಾಂಟಿಗ್ ಮಾಡಲು (ಅಧಿಕಾರ ನಡೆಸಲು) ಅವಕಾಶ ಸಿಕ್ಕಿದೆ. ಅದು ಕೊನೆಯ 2 ಓವರ್‌ಗಳು ಮಾತ್ರ. ಸಿಕ್ಕಿರುವ 2 ಓವರ್‌ಗಳಲ್ಲಿ (ಕಡಿಮೆ ಅವಧಿಯಲ್ಲಿ) ರಚನಾತ್ಮಕವಾಗಿ, ಜಾಣ್ಮೆಯಿಂದ ಕಾರ್ಯ ಮಾಡುವ ಮೂಲಕ ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಸಿಕ್ಸರ್ ಬಾರಿಸುತ್ತೇನೆ. ನನ್ನ ಅಧಿಕಾರಾವಾಧಿಯಲ್ಲಿ ಸಂಸ್ಥೆಯ ಕಾರ್ಮಿಕರು, ಸಿಬ್ಬಂದಿ ಹಾಗೂ ಅಧಿಕಾರಿಗಳ ಸಹಾಯ, ಸಲಹೆ ಅತ್ಯಗತ್ಯವಾಗಿದೆ ಎಂದು ತಮ್ಮನ್ನು ಕೊನೆ ಅವಧಿಯಲ್ಲಿ ಗುರುತಿಸಿದ ಪಕ್ಷದ ನಾಯಕರನ್ನು ಅಣಕಿಸುವ ರೀತಿಯಲ್ಲಿ ಉತ್ತರಿಸಿದ್ದು ವಿಶೇಷವಾಗಿತ್ತು.
ರು. 50 ಕೋಟಿ ಅನುದಾನ
ಸರ್ಕಾರ ವಾಯವ್ಯ ಸಾರಿಗೆ ಸಂಸ್ಥೆಗೆ ರು. 50 ಕೋಟಿ ಅನುದಾನ ನೀಡಿದೆ, ಸದ್ಯದಲ್ಲಿಯೇ 30 ಹವಾ ನಿಯಂತ್ರಿತ ಸ್ಲೀಪರ್ ಬಸ್, 150 ವೇಗದೂತ ಬಸ್‌ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ. ಇದರೊಟ್ಟಿಗೆ ಖಾಸಗಿಯವರ ಪೈಪೋಟಿ ಎದುರಿಸಲು ಗ್ರಾಮೀಣ ಪ್ರದೇಶಕ್ಕೆ ಪ್ರಾಯೋಗಿಕವಾಗಿ ಅತ್ಯಾಧುನಿಕ ಮೈಲೇಜ್ ನೀಡುವ ಸಣ್ಣ ವಾಹನಗಳ ಖರೀದಿಗಾಗಿ 2 ಕೋಟಿ ಮೀಸಲಿಟ್ಟು ಸದ್ಯದಲ್ಲಿಯೇ ಖರೀದಿಸಿ ರಸ್ತೆಗೆ ಇಳಿಸಲಾಗುವುದು. ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯ ಹಾಗೂ ಸಂಸ್ಥೆಯ ಆದಾಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲೆಡೆ ವಿಸ್ತರಿಸಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com