- ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ, ಗದಗ, ಫೆ. 5
ಆಧುನಿಕತೆ ಭರಾಟೆಯ ಇಂದಿನ ದಿನಗಳಲ್ಲಿ ಜನಪದ ಸಂಸ್ಕೃತಿಯು ವಿನಾಶದ ಅಂಚಿಗೆ ತಲುಪುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ, ಇಲ್ಲೊಬ್ಬ ಯುವಕ ಜನಪದ ಕಲೆಯನ್ನೇ ತನ್ನ ಉಸಿರಾಗಿಸಿಕೊಂಡು ತನ್ನದೇಯಾದ ಕೂಗು ಸಂಘಟನೆಯನ್ನು ಹುಟ್ಟುಹಾಕಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಜನಪದ ಕಲೆಯನ್ನು ಪ್ರದರ್ಶಿಸುವ ಮೂಲಕ ಎಲ್ಲರ ಮನ ಸೆಳೆಯುತ್ತಿದ್ದಾನೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿಶಿರೂರ ಗ್ರಾಮದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಗದಗನ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಕಾಲೇಜಿನ ಸ್ನೇಹಿತರ ತಂಡ ಕಟ್ಟಿಕೊಂಡು ತನ್ನ ಸ್ವಂತರ್ಚಿನಿಂದಲೇ ರಾಜ್ಯದ ಹಲವು ಕಡೆಗಳಲ್ಲಿ ತೆರಳಿ ಸುಮಾರು 60ಕ್ಕೂ ಅಧಿಕ ಜನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜನಪದ ಕಲೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಏನಿದು ಕೂಗು ಸಂಘಟನೆ?: ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಹಳ್ಳಿಕೇರಿಮಠ ಜನಪದ ಕಲೆಯಲ್ಲಿ ಆಸಕ್ತಿ ಹೊಂದಿ, ಇದರಲ್ಲಿ ಸಾಧನೆ ಮಾಡುವ ಉದ್ದೇಶದಿಂದ 2008 ರಲ್ಲಿ 20ಕ್ಕೂ ಅಧಿಕ ಸ್ನೇಹಿತರನ್ನು ಒಗ್ಗೂಡಿಸಿ 'ಕೂಗು' ಎಂಬ ಸಂಘಟನೆ ಹುಟ್ಟುಹಾಕಿದರು. ಇದೇ ಸಂಘಟನೆಯ ಮೂಲಕ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಸಂಸ್ಕೃತಿಗಳಾದ ಗೊರವನ ನೃತ್ಯ, ಚೌಡರ, ಪುರವಂತರ ಕಲೆ, ಭಜನೆ, ಡೊಳ್ಳಿನಪದ, ರಂಗಪದ, ಲಾವಣಿ ಗೀತೆ, ದೊಡ್ಡಾಟ, ಕೋಲಾಟ, ಕರಡಿಮಜಲು, ಹಂತಿಪದ ಮೊದಲಾದ ಜಾನಪದ ಕಲೆಗಳ ಕುರಿತು ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ. ನಾಡಿನ ಹೆಸರಾಂತ ಉತ್ಸವಗಳಾದ ಲಕ್ಕುಂಡಿ ಉತ್ಸವ, ಚಾಲುಕ್ಯ ಉತ್ಸವ, ಇಟಗಿ ಉತ್ಸವ, ಕನಕಗಿರಿ ಉತ್ಸವ, ಮಂಡ್ಯ ಉತ್ಸವ ಸೇರಿದಂತೆ ಕನ್ನಡ ಸಾಹಿತ್ಯ, ಸಂಗೀತ, ನೃತ್ಯ ಸಮ್ಮೇಳನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಇವರ ಸ್ನೇಹಿತರಾದ ರಾಜು ಬೆಟಗೇರಿ, ವಂಕಟೇಶ ಪತ್ತಾರ, ಹನುಮಂತ ದಾಸರ, ಸುಭಾಷ ಅಳವಂಡಿ, ರಾಜು ಬೆನಕೊಪ್ಪ, ಕುಮಾರ ಗಡ್ಡೆಪ್ಪನವರ, ಸುಜಾತ ಗೌಡರ, ವೀಣಾ ಬೆಂತೂರ, ಅಕ್ಕಮಹಾದೇವಿ ಸಾಲಿಮಠ, ಮಂಜುಳಾ ಹೊನ್ನಗುಡಿ, ವಿರೇಶ ನವಲಗುಂದ ಸೇರಿದಂತೆ ಹಲವು ಯುವಕ-ಯುವತಿಯರು ಇವರು ಕಟ್ಟಿರುವ ಕೂಗು ಸಂಘಟನೆಯಲ್ಲಿ ಇದ್ದಾರೆ.
ಹಲವು ಪ್ರಶಸ್ತಿ: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಡೆಸುವ ಕಲಾಪ್ರತಿಭೋತ್ಸವ, ಜಿಲ್ಲಾ ವಿಭಾಗ, ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳು, ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಹಾಗೂ ನೆಹರು ಯುವ ಕೇಂದ್ರದ ಭಾರತ ಸರ್ಕಾರ ಯುವಜನ ಮೇಳ, ಯುವಜನೋತ್ಸವ, ರಂಗಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಲವು ಪ್ರಶಸ್ತಿ ಲಭಿಸಿವೆ. ಅಲ್ಲದೇ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಬಂದಿವೆ. ಅವುಗಳಲ್ಲಿ ದೆಹಲಿಯ ಮಾನವ ಹಕ್ಕು ಸಮಿತಿ ವತಿಯಿಂದ ಪ್ರತಿವರ್ಷ ಕೊಡಮಾಡುವ ಡಾ. ಎಪಿಜೆ ಅಬ್ದುಲ್ಕಲಾಂ ಮಾನವ ಸೇವಾ ಪ್ರಶಸ್ತಿ, ಶಿವಮೊಗ್ಗದಲ್ಲಿ ಸಾಹಿತ್ಯ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಕಣ್ಮನಿ, ಬೆಂಗಳೂರಿನಲ್ಲಿ ಜರುಗಿದ ಜಾನಪದ ಕಾರ್ಯಕ್ರಮದಲ್ಲಿ ಕಲಾ ಅಪರಂಜಿ ಪ್ರಶಸ್ತಿ, ಬೆಳಗಾವಿಯಲ್ಲಿ ಆಯೋಜಿಸಿದ್ದ ಮಕ್ಕಳ ಸಮ್ಮೇಳನದಲ್ಲಿ ಕನ್ನಡಚೇತನ, ಗದಗದಲ್ಲಿ ಕಲಾವಿಕಾಸ ಪರಿಷತ್ ವತಿಯಿಂದ ಸಾಹಿತ್ಯ, ಸಂಗೀತ, ನೃತ್ಯ ಸಮ್ಮೇಳನದಲ್ಲಿ ಕಲಾಸಂಜೀವಿನಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ.