ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 5
ಬಸವ ಆವಾಸ ವಸತಿ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ಗ್ರಾಪಂ ಆಡಳಿತ ಮಂಡಳಿ ತಾರತಮ್ಯವೆಸಗಿದೆ ಎಂದು ಆರೋಪಿಸಿ ಸೋಮವಾರ ಸಮೀಪದ ಲಕ್ಕಲಕಟ್ಟಿ ಗ್ರಾಪಂ ವ್ಯಾಪ್ತಿಯ ನಾಗೇಂದ್ರಗಡ ಗ್ರಾಮಸ್ಥರು ಲಕ್ಕಲಕಟ್ಟಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಲಕ್ಕಲಕಟ್ಟಿ ಗ್ರಾಪಂ ವ್ಯಾಪ್ತಿಯ ನಾಗೇಂದ್ರಗಡ ಗ್ರಾಮಕ್ಕೆ 2012-13ರಲ್ಲಿ ಬಸವ ಆವಾಸ ವಸತಿ ಯೋಜನೆಯಡಿ 48 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಅದರಂತೆ ಫಲಾನುಭವಿಗಳು ನಿರ್ಮಿಸಿಕೊಂಡ ಮನೆಗಳಿಗೆ ಚಕ್ ನೀಡದೆ ಸತಾಯಿಸುತ್ತಿದ್ದಾರೆ. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಂದು ಪ್ರತಿಭಟನಾಕಾರರು ದೂರಿದರು.
ಪಂಚಾಯಿತಿಯ ಆಡಳಿತದ ಧೋರಣೆಯಿಂದ ಬೇಸತ್ತು ಇಂದು ಪಂಚಾಯಿತಿಗೆ ಮುತ್ತಿಗೆ ಹಾಕಿದ್ದೇವೆ. ಕೂಡಲೆ ಅನುದಾನದ ಚೆಕ್ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದು ಕುಳಿತರು. ಸ್ಥಳಕ್ಕಾಗಮಿಸಿದ ಪಂಚಾಯಿತಿಯ ಆಡಳಿತ ಮಂಡಳಿ ಅಧಿಕಾರಿಗಳು ಇನ್ನೆರೆಡು ದಿನಗಳಲ್ಲಿ ನಿಮಗೆ ನೀಡಬೇಕಾದ ಅನುದಾನದ ಚೆಕ್ ವಿತರಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ನೀಲವ್ವ ಮುದೇನೂರ, ಭೀಮವ್ವ ಗೌಡರ, ಲಕ್ಷ್ಮವ್ವ ಹೂಗಾರ, ಶರಣಪ್ಪ ಕಂಬಳ್ಳಿ, ಸುನಂದಾ ಇಟಗಿ, ಕಲ್ಲಪ್ಪ ಗೌಡರ, ಶರಣಪ್ಪ ಬಾರಕೇರ, ಶಿವಾಜಿ ಭಜಂತ್ರಿ, ಹನುಮಪ್ಪ ಹಂಡಿ, ಮೌನೇಶ ಬಡಿಗೇರ, ಹೊನಕೇರಪ್ಪ ಹಂಡಿ, ಕರಿಯಪ್ಪ ಜಿಗಳೂರ, ಮಲ್ಲಪ್ಪ ಮುದೇನೂರ, ಹನುಮಪ್ಪ ಆಡಿನ, ಅನ್ನಪೂರ್ಣ ಬೀಳಗಿ, ಶರಣವ್ವ ಬಿಂಗಿ, ಸುಶೀಲವ್ವ ಮಾರನಬಸರಿ, ಹುಸೇನಬಿ ಜಂಬಲ, ಲಕ್ಷ್ಮವ್ವ ಜಿಗಳೂರ ಮುಂತಾದವರು ಉಪಸ್ಥಿತರಿದ್ದರು.