ಕನ್ನಡಪ್ರಭ ವಾರ್ತೆ, ಮುಂಡರಗಿ, ಫೆ. 6
ತಂದೆ-ತಾಯಿಯನ್ನು ಮಕ್ಕಳು ಪ್ರೀತಿ, ಗೌರವದಿಂದ ಕಾಣಬೇಕೆಂದು ಬೈಲೂರಿನ ನಿಜಗುಣಾನಂದ ಶ್ರೀ ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಈಚೆಗೆ ಲಿಂಗೈಕ್ಯರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಿರಕಪ್ಪ ಹುಬ್ಬಳ್ಳಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ತಂದೆ-ತಾಯಿ ಇಬ್ಬರೇ ಹತ್ತು ಜನ ಮಕ್ಕಳನ್ನು ಹೊತ್ತು, ಹೆತ್ತು, ಸಾಕಿ ಬೆಳೆಸುತ್ತಾರೆ. ಆದರೆ, ಹತ್ತು ಜನ ಮಕ್ಕಳು ಇಬ್ಬರು ತಂದೆ, ತಾಯಿಯನ್ನು ನೋಡಿಕೊಳ್ಳದೇ ವೃದ್ದಾಶ್ರಮಗಳತ್ತ ಕಳಿಸುತ್ತಿದ್ದಾರೆ. ಕಣ್ಣಿಗೆ ಕಾಣುವ ಮನುಷ್ಯನನ್ನು ಪ್ರೀತಿ ಮಾಡದವರು ಕಾಣದ ದೇವರನ್ನು ಪ್ರೀತಿ ಮಾಡುವುದು ಹೇಗೆ ಸಾಧ್ಯ ಎಂದರು.
ಸಾವಿರ ದೇವಸ್ಥಾನಗಳನ್ನು ಕಟ್ಟಿಸಿ, ಅಭಿಷೇಕ ಮಾಡಿಸಿ, ಸೀರೆ ಉಡಿಸಿ, ಉಡಿ ತುಂಬದಿದ್ದರೂ ಪರವಾಗಿಲ್ಲ. ಆದರೆ, ಹೆತ್ತ ತಂದೆ ತಾಯಿಯ ಮನಸ್ಸು ನೋಯಿಸದಂತೆ ನೋಡಿಕೊಳ್ಳಬೇಕು. ಮುಪ್ಪಿನಕಾಲದಲ್ಲಿ ಅವರನ್ನು ವೃದ್ದಾಶ್ರಮಗಳಿಗೆ ಕಳಿಸದೇ ತಮ್ಮ ಹತ್ತಿರವೇ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುವುದು ನಿಜವಾದ ಬಸವ ಧರ್ಮವಾಗಿದೆ ಎಂದು ಹೇಳಿದರು.
ಸಾವು ಯಾವಾಗಲಾದರೂ ಬರಲಿ, ಆದರೆ ಇರುವತನಕ ಆರೋಗ್ಯವಾಗಿರಬೇಕು. ತಿರಕಪ್ಪ ಹುಬ್ಬಳ್ಳಿಯವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಅವರ ಕಾರ್ಯ ಮೆಚ್ಚುವಂತದ್ದು ಎಂದರು. ಜ. ಸಿದ್ಧಬಸವ ಕಬೀರ ಶ್ರೀಗಳು, ಮನಗುಂಡಿಯ ಬಸವಾನಂದ ಶ್ರೀಗಳು ಮಾತನಾಡಿ, ಸಾವು ಎನ್ನುವುದು ಚೈತನ್ಯ ಪೂರ್ಣವಾದದ್ದು. ಅದು ನಮ್ಮನ್ನು ಮತ್ತಷ್ಟು ಪ್ರೇರಣೆ ಮಾಡುತ್ತದೆ. ಸಾವು ನಾವು ಬಯಸಿದಾಗ ಬರಲ್ಲ. ಬೇಡವೆಂದಾಗ ಬಿಡಲ್ಲ. ಅದು ತನ್ನ ಸಮಯ ಬಂದಾಗ ತಾನೇ ನುಗ್ಗಿ ಬರುತ್ತದೆ. ಆದ್ದರಿಂದ ಸಾವಿಗೆ ಅಂಜಬಾರದು ಎಂದರು. ನಾಗೇಶ ಹುಬ್ಬಳ್ಳಿ ಸ್ವಾಗತಿಸಿದರು. ಎ.ಕೆ. ಮುಲ್ಲಾನವರ ನಿರೂಪಿಸಿ, ವಂದಿಸಿದರು.