ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣ ಸೇರಿದಂತೆ ನನ್ನ ಭಾಗದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಗಜೇಂದ್ರಗಡ ತಾಲೂಕು ಕೇಂದ್ರವಾಗಬೇಕೆನ್ನುವ ಜನರ ಕನಸು ನನಸಾಗಿಸಿದ ತೃಪ್ತಿ ನನಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ 2ನೇ ಅತ್ಯಂತ ದೊಡ್ಡ ಪಟ್ಟಣವೆನಿಸಿದ ಗಜೇಂದ್ರಗಡಕ್ಕೆ ಮೂಲ ಸೌಲಭ್ಯ ಮರೀಚಿಕೆಯಾಗಿತ್ತು. ನನ್ನ 9 ವರ್ಷದ ಈ ಅಧಿಕಾರಾವಧಿಯಲ್ಲಿ ಸರ್ಕಾರದ ಹಲವು ಯೋಜನೆಗಳನ್ನು ಗಜೇಂದ್ರಗಡಕ್ಕೆ ನೀಡಿದ್ದೇನೆ. ಇದಕ್ಕೆ ಸಹಕರಿಸಿದ ಗಜೇಂದ್ರಗಡ ಹೋರಾಟ ಸಮಿತಿಗೂ ಹಾಗೂ ಸಮಸ್ತ ಗಜೇಂದ್ರಗಡ ಭಾಗದ ಜನತೆಗೆ ಕೃತಜ್ಞತೆ ಸಲ್ಲಿಸುವುದರ ಜತೆಗೆ ಉತ್ತಮ, ಜನಪರ ಬಜೆಟ್ ಮಂಡಿಸಿರುವ ಸಿಎಂ ಜಗದೀಶ ಶೆಟ್ಟರ್ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.