ಗದಗ: ಗದಗ-ಬೆಟಗೇರಿ ಅವಳಿನಗರದ ಪ್ರಮುಖ 54 ವಕಾರಗಳು ನಗರಸಭೆಯ ಆಸ್ತಿಯಾಗಿದ್ದು, ಅದನ್ನು ಶೇ 50ರಷ್ಟು ಖಾಸಗಿಯವರಿಗೆ ಮಾರಾಟ ಮಾಡಲು ಉದ್ದೇಶಿಸಿರುವ ನಗರಸಭೆಯ ಆಡಳಿತ ಮಂಡಳಿಯ ಕ್ರಮ ಖಂಡನೀಯ, ಇದನ್ನು ಕೂಡಲೇ ರದ್ದುಪಡಿಸಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್ ಹೇಳಿದರು.
ಅವರು ಇತ್ತೀಚೆಗೆ ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರಸಭೆಯ ಆಡಳಿತ ಮಂಡಳಿಯವರು ಈ ರೀತಿಯ ಠರಾವು ಮಾಡಿರುವುದು ಕಾನೂನು ವಿರೋಧಿಯಾಗುತ್ತದೆ. ಈಗಾಗಲೇ ಈ ವಿಷಯ ನ್ಯಾಯಾಲಯದಲ್ಲಿದ್ದು, ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇವರಿಗಿಲ್ಲ. ಸದ್ಯದ ಮಾರುಕಟ್ಟೆಯ ದರದಲ್ಲಿ ರು. 400 ಕೋಟಿಗಳಷ್ಟು ಬೆಲೆಬಾಳುತ್ತಿದ್ದು, ಇದನ್ನು ಮಾರಾಟ ಮಾಡುವ ಮೂಲಕ ಸಾರ್ವಜನಿಕರ ಆಸ್ತಿಯನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಸಹಿಸುವುದಿಲ್ಲ. 1889ರಲ್ಲಿ ಹತ್ತಿ ವ್ಯಾಪಾರಕ್ಕಾಗಿ ನೀಡಲಾಗಿದ್ದ ಲೀಜ್ ಅವಧಿ 1998ಕ್ಕೆ ಪೂರ್ಣಗೊಂಡಿದ್ದು, ಈ ಅವಧಿಯ ನಂತರ ಅಲ್ಲಿ ಭೂ ಬಾಡಿಗೆದಾರರಾಗಿದ್ದವರಿಗೆ ಎಪಿಎಂಸಿಯಲ್ಲಿ ರಿಯಾಯ್ತಿ ದರದಲ್ಲಿ ನಿವೇಶನಗಳನ್ನು ನೀಡಲಾಗಿದೆ.
ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಮಾರಾಟ ಮಾಡಲು ಹೊರಟಿರುವುದನ್ನು ಕಾಂಗ್ರೆಸ್ ಪಕ್ಷವು ಸಹಿಸುವುದಿಲ್ಲ, ಬಹು ಕೋಟಿ ಬೆಲೆಯ 26 ಎಕರೆ ವ್ಯಾಪ್ತಿಯ ಈ ವಕಾರಗಳನ್ನು ಯಾರದೋ ಹಿತಾಸಕ್ತಿ ಬಲಿಯಾಗುವುದಕ್ಕೆ ನಾವು ಅವಕಾಶ ನೀಡುವುದಿಲ್ಲ, ಇದಕ್ಕೆ ಧ್ವನಿ ಗೂಡಿಸುವ ನಿಟ್ಟಿನಲ್ಲಿ ನಗರಸಭೆಯ ಆಡಳಿತ ಮಂಡಳಿ ತೆಗೆದುಕೊಂಡಿರುವ ಠರಾವುಗಳನ್ನು ಕೂಡಲೇ ರದ್ದುಪಡಿಸಿ, ಆ ಎಲ್ಲಾ ಆಸ್ತಿಯನ್ನು ನಗರಸಭೆಯ ವ್ಯಾಪ್ತಿಗೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಅವರಿಂದಲೂ ಸ್ಪಂದನೆ ದೊರಕಿದೆ ಎಂದರು.
ಮಾಜಿ ಶಾಸಕ ಡಿ.ಆರ್.ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಉಮರ್ಫಾರೂಕ್ ಹುಬ್ಬಳ್ಳಿ, ಅಕ್ಬರ್ಸಾಬ ಬಬರ್ಚಿ, ಬರಕತ್ ಅಲಿ ಮುಲ್ಲಾ, ಗುರಣ್ಣ ಬಳಗಾನೂರ, ಅಶೋಕ ಮಂದಾಲಿ ಹಾಜರಿದ್ದರು.
ಅಸಮಾಧಾನ ಬಹಿರಂಗ: ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಅವರ ಪಕ್ಷದ ಅಧ್ಯಕ್ಷರೇ ಈ ರೀತಿಯ ಠರಾವು ಮಾಡಿದ್ದು ಈ ಹಿಂದೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ನಗರಸಭೆಯ ಅಧ್ಯಕ್ಷರು ತಾವು ಅಧ್ಯಕ್ಷರಾಗಿ ಆಯ್ಕೆಯಾಗುವ ವೇಳೆಯಲ್ಲಿಯೇ ಬಿಜೆಪಿ ಸದಸ್ಯರ ಬೆಂಬಲ ಪಡೆದಿದ್ದು, ಕಾಂಗ್ರೆಸ್ ವರಿಷ್ಠರಿಗೆ ಬೇಸರ ಮೂಡಿಸಿದ್ದರು. ಆದರೆ ಕಾಂಗ್ರೆಸ್ ಮುಖಂಡರು ಅವರ ಪಕ್ಷದವರೇ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು ಗಮನಾರ್ಹವಾಗಿದೆ.