ಕನ್ನಡಪ್ರಭ ವಾರ್ತೆ, ರೋಣ, ಜ. 22
ಅರೆಕಾಲಿಕ ವೈದ್ಯನ ಅಚಾತುರ್ಯದಿಂದ 7ನೇ ತರಗತಿ ಓದುತ್ತಿರುವ ತಾಲೂಕಿನ ಸವಡಿ ಗ್ರಾಮದ 13ರ ಹರೆಯದ ಬಾಲಕಿ ಕಾಲನ್ನೇ ಕಳೆದುಕೊಂಡಿದ್ದಾಳೆ. ಮಗಳಿಗಾದ ಅನ್ಯಾಯಕ್ಕೆ ನ್ಯಾಯ ಮತ್ತು ಪರಿಹಾರ ಕೊಡಿಸಲು ತಂದೆ ಈಶ್ವರಪ್ಪ ಪರಡ್ಡಿ ಹೋರಾಟ ನಡೆಸಿದರೂ ಫಲ ನೀಡಲಿಲ್ಲ.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಲೋಕಾಯುಕ್ತರಿಗೆ ಅಹವಾಲು ಸಲ್ಲಿಸಲು ಆಗಮಿಸಿದ್ದ ಈಶ್ವರಪ್ಪ ಪರಡ್ಡಿ, ನ್ಯಾಯಕ್ಕಾಗಿ ತಾವು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಆರು ತಿಂಗಳ ಹಿಂದೆ ಚಕ್ಕಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಬಾಲಕಿ ಚನ್ನಮ್ಮ ಪರಡ್ಡಿಯನ್ನು ಚಿಕಿತ್ಸೆಗೆಂದು ಗ್ರಾಮದ ಭಾಗ್ಯಶ್ರೀ ಕ್ಲಿನಿಕ್ನ ಡಾ ವೀರೇಶ ಹೂಗಾರ ಅವರಲ್ಲಿ ಕರೆದೊಯ್ಯಲಾಗಿತ್ತು. ವೈದ್ಯರ ಅರೆಬರೆ ಚಿಕಿತ್ಸೆ ಹಾಗೂ ತಪ್ಪು ಮಾಹಿತಿಯಿಂದಾಗಿ ಬಾಲಕಿ ಕಾಲು ಕಳೆದುಕೊಂಡಳು. ಮಗಳ ಆರೋಗ್ಯಕ್ಕಾಗಿ ಈಗಾಗಲೇ ಲಕ್ಷಾಂತರ ಹಣ ವೆಚ್ಚ ಮಾಡಿದ್ದೇನೆ. ಇಲಾಖೆ ಈ ವೈದ್ಯರ ಮೇಲೆ ಕ್ರಮ ಜರುಗಿಸಿ, ತನಗೆ ನ್ಯಾಯ ಕೊಡಿಸಬೇಕೆಂದು ಈಶ್ವರ ಪರಡ್ಡಿ ಮನವಿ ಮಾಡಿಕೊಂಡರು.
ಪರಿಶೀಲಿಸಿ ಕ್ರಮ: ಲೋಕಾಯುಕ್ತ ಅಧಿಕಾರಿ ಸಂಗನಗೌಡ್ರ ಜಿಲ್ಲಾ ವೈದ್ಯಾಧಿಕಾರಿ ಡಾ ಡಿ.ಬಿ. ಚನ್ನಶೆಟ್ಟಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಬಾಲಕಿಯ ಪಾಲಕರಿಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೇಳಿದ್ದೇವೆ ಎಂದರು. ಆಗ ಸಂಗನಗೌಡ್ರ ಮಾತನಾಡಿ, ಸವಡಿ ಗ್ರಾಮದ ನಕಲಿ ವೈದ್ಯನಿಂದ ಅನಾಹುತವಾಗಿದ್ದರೂ ನೀವೇಕೆ ಕ್ರಮ ಕೈಗೊಂಡಿಲ್ಲ ಎಂದು ವಿಚಾರಿಸಿದರು. ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ವೈದ್ಯನ ಪ್ರಮಾಣಪತ್ರ ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ಡಾ ಚನ್ನಶೆಟ್ಟಿ ಹೇಳಿದರು.
ಪರವಾನಿಗೆ ಇಲ್ಲದೆ ಪಡಿತರ: ಬೊಮ್ಮಸಾಗರ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ 6 ತಿಂಗಳಿಗೆ ಒಬ್ಬರು, 3 ತಿಂಗಳಿಗೆ ಒಬ್ಬರಂತೆ ಪಡಿತರ ವಿತರಿಸುತ್ತಾರೆ. ವಿತರಕರು ಯಾವುದೇ ಮಾನದಂಡ ಅನುಸರಿಸುವುದಿಲ್ಲ. ಇದರಿಂದ ಬಡಜನತೆಗೆ ತೀವ್ರ ತೊಂದರೆಯಾಗುತ್ತಿದೆ. ಪರವಾನಿಗೆ ಉಳ್ಳವರೇ ಪಡಿತರ ವಿತರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮದ ಲೋಕನಗೌಡ ಅಂಟರದಾನಿ ಮನವಿ ಸಲ್ಲಿಸಿದರು.
ಮಾಹಿತಿ ಹಕ್ಕಿನಡಿಯಲ್ಲಿ ಸೂಡಿ ಗ್ರಾಪಂ ಪಿಡಿಓ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ 3 ತಿಂಗಳಾದರೂ ಮಾಹಿತಿ ನೀಡಿಲ್ಲ. ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ಸೂಡಿ ಗ್ರಾಮದ ಎಂ.ಕೆ. ಬಾದವಾಡಗಿ ಅರ್ಜಿ ಸಲ್ಲಿಸಿದರು. ಒಟ್ಟು 4 ಅರ್ಜಿಗಳು ಬಂದಿದ್ದವು. ಕೆಲವು ಅರ್ಜಿಗಳ ಕುರಿತು ಲೋಕಾಯುಕ್ತ ಅಧಿಕಾರಿ ಸಂಗನಗೌಡ್ರ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ವಿಚಾರಿಸಿದರು.