ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜ. 23
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಾಡಿದ ಕಾಮಗಾರಿಗಳಿಗೆ ಹಣ ಪಾವತಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಕ್ರಮ ಖಂಡಿಸಿ ಗ್ರಾಮಸ್ಥರು ಬುಧವಾರ ಸಮೀಪದ ರಾಮಗೇರಿ ಗ್ರಾಪಂ ಬಾಗಿಲಿಗೆ ಮುಳ್ಳು ಕಂಟಿಗಳನ್ನು ಹಚ್ಚಿ, ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 2 ತಿಂಗಳ ಹಿಂದೆ ಕಾಮಗಾರಿಗಳನ್ನು ಮಾಡಿ ಮುಗಿಸಿದ್ದರೂ ಇದುವರೆಗೂ ಹಣ ಪಾವತಿ ಮಾಡಿಲ್ಲ, ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಅಲ್ಲದೇ ಗ್ರಾಪಂ ಅಧ್ಯಕ್ಷರು, ಸದಸ್ಯರು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯ ಬಿಲ್ ಪಾಸ್ ಮಾಡುವಂತೆ ಠರಾವು ಮಾಡಿದ್ದರು. ಆದರೆ ಎಂಜಿನಿಯರ್ ಎಂಬಿ ಬರೆಯಲು ವಿಳಂಬ ಮಾಡುತ್ತಿದ್ದಾರೆ. ಸಲ್ಲದ ಕಾರಣಗಳನ್ನು ಹೇಳಿ ಬಿಲ್ ಪಾವತಿಯಾಗದಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಹಣ ಪಡೆಯಲು ಸುಮಾರು 2 ತಿಂಗಳಿಂದ ಗ್ರಾಪಂ ಕಚೇರಿಗೆ ಅಲೆದು ಬೇಸರಗೊಂಡು ಪ್ರತಿಭಟನೆಯ ಹಾದಿ ಹಿಡಿಯಬೇಕಾಯಿತು ಎಂದು ಫಕ್ಕಣ್ಣ ಲಕ್ಕಣ್ಣವರು, ಇತರರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್ ಮಹಾಂತೇಶ ಅಕ್ಕೂರ ಅವರಿಗೆ ಮುತ್ತಿಗೆ ಹಾಕಿದರು. ಗ್ರಾಪಂ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಗ್ರಂಥಾಲಯ ಗೋಡೆ ನಿರ್ಮಾಣ ಕಾಮಗಾರಿಗೆ ತಕ್ಷಣ ಹಣ ಪಾವತಿಸಲು ಸಾಧ್ಯವಾಗುವುದಾದರೆ ನಮ್ಮ ಕೂಲಿ ಹಣ ನೀಡಲು ಮೀನಮೇಷ ಏಕೆ ಎಂದು ಪ್ರಶ್ನಿಸಿದರು.
ಸ್ಥಳದಲ್ಲಿದ್ದ ಗ್ರಾಪಂ ಅಧ್ಯಕ್ಷ ನಿಂಗನಗೌಡ ಪಾಟೀಲ್, ಗ್ರಾಪಂ ಸದಸ್ಯ ನಿಲೇಶಪ್ಪ ಕಾಳೆ ಹಾಗೂ ನಾಗರಾಜ ಮಡಿವಾಳರ ಗ್ರಾಮಸ್ಥರಿಗೆ ಉದ್ಯೋಗ ಖಾತ್ರಿ ಯೋಜನೆ ಹಣವನ್ನು ಪಾವತಿಸಲು ಅನಿವಾರ್ಯ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದೆ. ಗ್ರಾಪಂನಿಂದ ಖಾತ್ರಿ ಯೋಜನೆ ಹಣ ಪಾವತಿಯಾಗುವಂತೆ ಕ್ರಮ ಕೈಗೊಳ್ಳುವಂತೆ ಪಿಡಿಓ ಹಾಗೂ ಎಂಜಿನಿಯರ್ಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
ಸೋಮಪ್ಪ ಪೂಜಾರ, ಸುರೇಶ ಬಸಪ್ಪನವರ, ತಿಪ್ಪಣ್ಣ ಬಸಪ್ಪನವರ, ರಾಮನಗೌಡ ಪಾಟೀಲ್, ಯಲ್ಲಪ್ಪ ಬೆಟಗೇರಿ, ಹಾಲಪ್ಪ ಪೂಜಾರ, ನಭಿಸಾಬ್ ಅಣ್ಣಗೇರಿ, ನೀಲಗಿರಯಪ್ಪ ಕೆರೂರು, ರಾಜೇಸಾಬ್ ಅಣ್ಣಿಗೇರಿ, ಕೋಟೆಪ್ಪ ಗಂಜಿಗಟ್ಟಿ, ತಿರಕಪ್ಪ ಯರ್ಲಗಟ್ಟಿ, ಬಸವರಾಜ ಕರಿಯಪ್ಪನವರ, ಯಲ್ಲಪ್ಪ ಹುಣಿಸಿಮರದ ಭಾಗವಹಿಸಿದ್ದರು.