ಕನ್ನಡಪ್ರಭ ವಾರ್ತೆ, ಮುಳಗುಂದ, ಜ. 23
ಪಟ್ಟಣದ ಓಣಿಗಳು ಸ್ವಚ್ಛ ಹಾಗೂ ಶುಚಿತ್ವವಾಗಿರಲು ಕೇವಲ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಂದ ಸಾಧ್ಯವಿಲ್ಲ. ಬದಲಾಗಿ ಸಾರ್ವಜನಿಕರು ಪಪಂನೊಂದಿಗೆ ಕೈಜೊಡಿಸಿ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಚರಂಡಿಗೆ ಎಸೆಯದೇ ಪಪಂ ತಳ್ಳು ಗಾಡಿ ಅಥವಾ ತ್ಯಾಜ್ಯ ಸಂಗ್ರಹ ತೊಟ್ಟಿಗೆ ಹಾಕುವುದರಿಂದ ನೈರ್ಮಲ್ಯ ಗ್ರಾಮವಾಗಿಸಲು ಸಾಧ್ಯ ಎಂದು ಪಪಂ ಅಧ್ಯಕ್ಷ ವಿ.ಪಿ. ವಂಟಕರ ಅಭಿಪ್ರಾಯಪಟ್ಟರು.
ಈಚೆಗೆ ಅವರು ಸ್ಥಳಿಯ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಉತ್ತಮ ಆಡಳಿತ ಮಾಸಾಚರಣೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿದರು. ಪಪಂ ಮುಖ್ಯಾಧಿಕಾರಿ ವಿ.ಜಿ. ಸುಲಾಖೆ ಮಾತನಾಡಿ, ಎಲ್ಲಿಂದರಲ್ಲಿ ಬಿಸಾಕುವ ಕಸ ಪರಿಸರಕ್ಕೆ ಹಾನಿಯಾಗುವದರ ಜತಗೆ ಸಾಂಕ್ರಾಮಿಕ ಕಾಯಿಲೆ ಹರಡುವಂತೆ ಮಾಡುತ್ತದೆ. ಆದ್ದರಿಂದ ಪಪಂನೊಂದಿಗೆ ಸಾರ್ವಜನಿಕರು ಸಹಕರಿಸಿ ಮನೆಯಲ್ಲಿನ ತ್ಯಾಜ್ಯವನ್ನು ಪಪಂ ಗಾಡಿಗೆ ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಕುಬೇರಪ್ಪ ಗಡಾದ, ಕೆ.ಎಲ್. ಕರಿಗೌಡ, ಮಲ್ಲವ್ವ ಹಾರೋಗೆರಿ, ಬಸವರಾಜ ಬಾತಖಾನಿ, ವಿ.ವಿ. ವಾಲಿ, ಪಪಂ ಸಿಬ್ಬಂದಿ ಮಂಜುಳಾ ಗಾಣಿಗೇರ, ಎಂ.ಸಿ. ಸಜ್ಜನ, ಮುನಿರ್ ನದ್ದಿಮುಲ್ಲಾ ಹಾಗೂ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಪಟ್ಟಣ ಪಂಚಾಯತಿ ಆವರಣದಿಂದ ಪ್ರಾರಂಭವಾದ ಉತ್ತಮ ಆಡಳಿತ ಮಾಸಾಚರಣೆ ಜಾಥಾ ಊರಿನ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಿತು.