ಕನ್ನಡಪ್ರಭ ವಾರ್ತೆ, ಗದಗ, ಜ. 23
ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಜನಾಂಗದ ಬಾಂಧವ್ಯ ಬೆಸೆಯುವ ಸಂಬಂಧವಾಗಿ ಈ ಬಾರಿಯ ಹಜರತ್ ಮಹಮದ್ ಪೈಗಂಬರ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿ ಜ. 25ರಂದು ಆಚರಿಸಲಾಗುವುದು ಎಂದು ಗದಗ-ಬೆಟಗೇರಿ ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಎಂ.ಐ. ನವಲೂರ ಹೇಳಿದರು.
ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರವಾದಿ ಹಜರತ್ ಮಹಮದ್ ಪೈಗಂಬರ ಅವರು ಸಮಾಜಕ್ಕೆ ನೀಡಿರುವ ದಾರಿದೀಪದಲ್ಲಿ ಎಲ್ಲರೂ ಒಂದಾಗಿ ಶಾಂತಿಯನ್ನು ನೆಲೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದ್ದು, ಹಿಂದೂ-ಮುಸ್ಲಿಂ ಬಾಂಧವ್ಯ ಮತ್ತಷ್ಟು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ಸಲದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಹಳೆಬಸ್ ನಿಲ್ದಾಣ ಹತ್ತಿರವಿರುವ ಸರ್ಕಾರಿ ಉರ್ದು ಕೇಂದ್ರ ಶಾಲೆ ನಂ-2 ರಲ್ಲಿ ಜ. 25ರಂದು ಮಹಮದ್ ಪೈಗಂಬರ ಜಯಂತ್ಯುತ್ಸವ ಕಾರ್ಯಕ್ರಮ ನಡೆಸಲಾಗುವುದು. ಅಂದು ಬೆಳಗ್ಗೆ 9 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ರ್ಯಾಲಿ ನಡೆಸಲಾಗುವುದು. ಬಳಿಕ ಮಧ್ಯಾಹ್ನ 3 ಗಂಟೆಗೆ ಪೈಗಂಬರ ಜಯಂತಿ ಕಾರ್ಯಕ್ರಮ ನಡೆಯಲಿದೆ. ಸಾನ್ನಿಧ್ಯವನ್ನು ಮುಂಬೈನ ಹಜರತ್ ಮೌಲಾನಾ ಮುಪ್ತಿಮಹ್ಮದ ಉಮರಸಾ ಕಾಸ್ಮಿ ಹಾಗೂ ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ವಹಿಸುವರು. ಉದ್ಘಾಟನೆಯನ್ನು ಮಾಜಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ವಹಿಸುವರು.
ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಸಾಧಿಕ್ ನರಗುಂದ, ಎಂ.ಐ. ನವಲೂರ, ನಗರಸಭೆ ಸದಸ್ಯ ಸುರೇಶ ಕಟ್ಟಿಮನಿ, ಪೀರಸಾಬ ಕೌತಾಳ ಮುಂತಾದವರು ಆಗಮಿಸುವರು ಎಂದರು. ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಅಬುಬಕರ ಅಣ್ಣಿಗೇರಿ, ಪ್ರಧಾನ ಕಾರ್ಯದರ್ಶಿ ನಿಸ್ಸಾರಹ್ಮದ ಖಾಜಿ, ಪ್ರೊ. ಕೆ.ಜಿ.ನಾಗರಕಟ್ಟಿ, ಮುನ್ನಾ ರೇಶ್ಮಿ, ನಬೀಬಸಾಬ ಕೊರ್ಲಹಳ್ಳಿ ಉಪಸ್ಥಿತರಿದ್ದರು.