ಗಜೇಂದ್ರಗಡ: ಪಟ್ಟಣದಲ್ಲಿನ ಜನತೆಯ ನಿರೀಕ್ಷೆಯಂತೆ ಅಭಿವೃದ್ಧಿ ಕಾಮಗಾರಿಗಳು ಸಮರೋಪಾದಿಯಲ್ಲಿ ಸಾಗಿದ್ದು, ಕಾಮಗಾರಿ ಕಳಪೆ ಕಂಡು ಬಂದಲ್ಲಿ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಅವರು ಶನಿವಾರ ಸ್ಥಳೀಯ ಜೋಡು ರಸ್ತೆಯಲ್ಲಿ ರು. 2 ಕೋಟಿ ವೆಚ್ಚದಲ್ಲಿ ನಡೆದಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಟ್ಟಣದ ಅಭಿವೃದ್ಧಿಯಲ್ಲಿ ಸ್ಥಳೀಯ ಜನ ಪ್ರತಿನಿಧಿಗಳ ಪಾತ್ರವು ಪ್ರಾಮುಖವಾದದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸಿ ಜನತೆಯ ಪ್ರೀತಿಗೆ ಪಾತ್ರರಾಗಿ ಎಂದು ಸ್ಥಳೀಯ ಜನ ಪ್ರತಿನಿಧಿಗಳಿಗೆ ಸಚಿವರು ತಿಳಿಸಿದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಪುರಸಭಾ ಉಪಾಧ್ಯಕ್ಷ ಭಾಸ್ಕರ ರಾಯಭಾಗಿ, ದುರುಗಪ್ಪ ಬಳೂಟಗಿ, ಅಂಬರೇಶ ಅರಳಿ, ಬಾಳು ಗೌಡರ, ಪ್ರಕಾಶ ಜಾಲಿಹಾಳ ಇದ್ದರು.