ಕನ್ನಡಪ್ರಭ ವಾರ್ತೆ, ಗದಗ, ಜ. 28
ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜಯಕರ್ನಾಟಕ ಸಂಘಟನೆಯ ಗದಗ ಜಿಲ್ಲಾ ಪ್ರಥಮ ಸಮಾವೇಶವನ್ನು ಜ. 30ರಂದು ಬೆಳಗ್ಗೆ 11.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಕಾಂತ ಚವ್ಹಾಣ ಹೇಳಿದರು.
ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಸಾನ್ನಿಧ್ಯವನ್ನು ಬೂದೀಶ್ವರ ಸಂಸ್ಥಾನ ಮಠದ ಅಭಿನವ ಬೂದೀಶ್ವರ ಶ್ರೀಗಳು ಹಾಗೂ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸುವರು. ಶಾಸಕ ಸಿ.ಸಿ. ಪಾಟೀಲ ಉದ್ಘಾಟಿಸುವರು. ಕನ್ನಡಾಂಬೆಯ ಭಾವಚಿತ್ರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಮಾಲಾರ್ಪಣೆ ಮಾಡುವರು. ಗಾಂಧೀಜಿ ಭಾವಚಿತ್ರಕ್ಕೆ ಶಾಸಕ ಶ್ರೀಶೈಲಪ್ಪ ಬಿದರೂರ ಪುಷ್ಪಾರ್ಪಣೆ ಮಾಡುವರು. ಹೊಸ ಪದಾಧಿಕಾರಿಗಳನ್ನು ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಎನ್. ಮುತ್ತಪ್ಪ ರೈ ಬರಮಾಡಿಕೊಳ್ಳುವರು ಎಂದರು.
ಸಂಸದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡ್ರ, ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಮಾಜಿ ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಎಸ್.ಎಸ್. ಪಾಟೀಲ, ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಎಂ.ಎಸ್. ದೊಡ್ಡಗೌಡ್ರ, ಎಸ್.ಎನ್. ಕಾತರಕಿ, ವಿಜಯಕುಮಾರ ಗಡ್ಡಿ, ಎಸ್.ಎಚ್. ಶಿವನಗೌಡರ, ಜಗದೀಶ ಕುಲಕರ್ಣಿ, ರವಿಕಾಂತ ಅಂಗಡಿ, ಐ.ಎಸ್. ಪೂಜಾರ, ಬಸವರಾಜ ಮುತಗಿ, ರಾಮಕೃಷ್ಣ ಕಟಗಿ, ಪ್ರಭಯ್ಯ ನಂದಿವೇರಮಠ, ವಿಜಯಕುಮಾರ ಕೌಲೂರ, ರಮೇಶ ಆನಮಟ್ಟಿ, ರವೀಂದ್ರನಾಥ ದೊಡ್ಡಮೇಟಿ ಉಪಸ್ಥಿತರಿರುವರು. ಅಂದು ಬೆಳಗ್ಗೆ 9 ಗಂಟೆಗೆ ಜರಗುವ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಗೆ ಬಿಎಸ್ಸಾರ್ ಮುಖಂಡ ಅನಿಲ ಮೆಣಸಿನಕಾಯ ಚಾಲನೆ ನೀಡಿವರು. ಮೆರವಣಿಗೆ ಮುಳಗುಂದ ನಾಕಾದಿಂದ ಶುರುವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಾಮಿ ವಿವೇಕಾನಂದ ಸಭಾಭವನ ತಲುಪುವುದು ಎಂದರು.
ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಈಶಪ್ಪ ನಾಯ್ಕರ, ಗದಗ ತಾಲೂಕು ಅಧ್ಯಕ್ಷ ಸುರೇಶ ಮೇದಾರ ಇದ್ದರು.