ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ

Updated on

ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 3
ಗುಣಮಟ್ಟದ ಶಿಕ್ಷಣಕ್ಕಾಗಿ ನ. 6ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಪ್ರಾರಂಭಿಸಲಿದ್ದು, ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಡರಗಿ ತಾಲೂಕಿನ ಶೈಕ್ಷಣಿಕ ಬ್ಲಾಕ್ನ 13 ಕ್ಲಸ್ಟರ್ಗಳ ವ್ಯಾಪ್ತಿಯಲ್ಲಿ 2 ಹಂತದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಹಾಗೂ ಕುಟುಂಬದ ಸಮೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಹೇಳಿದರು.
ಅವರು ಗುರುವಾರ ತಹಸೀಲ್ದಾರ್ ಕಚೇರಿಯಲ್ಲಿ ಜರುಗಿದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯಲ್ಲಿ ವಿವಿಧ ಇಲಾಖಾ ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡಿದರು.
ನ. 6 ಹಾಗೂ 7ರಂದು ಶಾಲಾ ಹಂತದಲ್ಲಿ ಸಮೀಕ್ಷೆ ನಡೆಯಲಿದ್ದು, ಶಾಲೆ ಬಿಟ್ಟ ಮಕ್ಕಳು ಎಲ್ಲಿರುತ್ತಾರೆ? ಏಕೆ ಶಾಲೆ ಬಿಡುತ್ತಾರೆ? ಅವರ ಸ್ಥಿತಿಗತಿ ಏನು? ಎಂದು ತಿಳಿಯಲು ಪ್ರಯತ್ನ ಮಾಡುವುದರ ಜತೆಗೆ ಪ್ರತಿ ಮನೆಗೂ ಭೇಟಿ ನೀಡಲಾಗುವುದು ಎಂದರು.
128 ತಂಡ, 545 ಸಿಬ್ಬಂದಿ: ಸಮೀಕ್ಷಾ ಕಾರ್ಯದಲ್ಲಿ 128 ತಂಡಗಳನ್ನು ರಚನೆ ಮಾಡಲಾಗಿದ್ದು, 545 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ತಂಡದಲ್ಲಿ ಇಬ್ಬರು ಶಿಕ್ಷಕರು, ಒಬ್ಬರು ಎನ್ಜಿಒ ಹಾಗೂ ಯಾವುದೇ ಇಲಾಖೆಯ ಒಬ್ಬರನ್ನು ಭಾಗಿದಾರರನ್ನಾಗಿ ತೆಗೆದುಕೊಳ್ಳಲಾಗುವುದು.
ಸಮೀಕ್ಷಾ ಕಾರ್ಯದ ಸಂದರ್ಭದಲ್ಲಿ ಪ್ರತಿ ತಂಡಕ್ಕೆ ಒಬ್ಬರು ಮೇಲ್ವಿಚಾರಕರಿರುತ್ತಾರೆ. ನ. 13ರಿಂದ 17ರ ವರೆಗೆ 2ನೇ ಹಂತದ ಕುಟುಂಬ ಸಮೀಕ್ಷೆಯಲ್ಲಿಯೂ ಈ ತಂಡಗಳು ಪಾಲ್ಗೊಳ್ಳಲಿವೆ.
ಇದರಲ್ಲಿ ಕಾರ್ಮಿಕ, ಪೌರಾಡಳಿತ, ಕಂದಾಯ, ಆರೋಗ್ಯ, ಪಂಚಾಯತ್ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ, ಬಿಸಿಎಂ, ಪೊಲೀಸ್ ಇಲಾಖೆ, ಭೂ, ಗಣಿ, ತೋಟಗಾರಿಕೆ, ಅರಣ್ಯ ಸೇರಿದಂತೆ ಅನೇಕ ಭಾಗಿದಾರ್ ಇಲಾಖೆಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರ ಸಹಾಯವನ್ನೂ ಪಡೆಯಲಾಗುವುದು. ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಸ್.ಆರ್. ಶಿರಕೋಳ, ಎಲ್ಲರೂ ಶಿಕ್ಷಣ ಪಡೆಯಲು ಸರ್ಕಾರ ಸಾಕಷ್ಟು ನೆರವು ಮತ್ತು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳು ಯಶಸ್ವಿಯಾಗಲು ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಮುದಾಯ ಸಹಕರಿಸಬೇಕೆಂದರು. ಪುರಸಭೆ ವ್ಯಾಪ್ತಿಯಲ್ಲಿ ಗುಡಿಸಲು ವಾಸಿಗಳ ಹಾಗೂ ಅಲೆಮಾರಿ ಜನಾಂಗಗಳ ಸಂಪೂರ್ಣ ಮಾಹಿತಿ ಪಡೆಯುವಲ್ಲಿ ಪುರಸಭೆ ಅಧಿಕಾರಿಗಳು ಸಹಕರಿಸಬೇಕು ಎಂದರು. ಸಭೆಯಲ್ಲಿ ಶಂಕರಲಿಂಗೇಗೌಡ, ಎಲ್.ಬಿ. ಹೊಸಳ್ಳಿ, ಎಂ.ಎಫ್. ಡಾಲಾಯತ್, ಕೆ.ಎ. ಹಿರೇಮಠ, ಕಾಶೀನಾಥ ಬಿಳಿಮಗ್ಗದ, ಜೆ.ಎನ್. ಕಮ್ಮಾರ, ಆರ್.ಬಿ. ಮುಳ್ಳಳ್ಳಿ ಇದ್ದರು. ಡೈಟ್ ಉಪನ್ಯಾಸಕ ಎಸ್.ಎನ್. ಹಳ್ಳಿಗುಡಿ ಸ್ವಾಗತಿಸಿದರು. ಎಂ.ಡಿ. ಭಾವಿಮನಿ ವಂದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com