ಕನ್ನಡಪ್ರಭ ವಾರ್ತೆ, ಗದಗ, ಆ. 4
ಹಾಲಕೆರೆ ಗ್ರಾಮ ರಾಷ್ಟ್ರದಲ್ಲಿ ಗುರುತಿಸುವ ಸಾಧನೆಗೆ ಸೋಮವಾರ ಸಾಕ್ಷಿಯಾಯಿತು. ಗ್ರಾಮದ ಅನ್ನದಾನ ಮಠದ ಮಹಾತಪಸ್ವಿ ಹಿರಿಯ ಅನ್ನದಾನ ಮಹಾಶಿವಯೋಗಿಗಳ ಪುಣ್ಯಾರಾಧನೆಯ ಶತಮಾನೋತ್ಸವದ ಅಂಗವಾಗಿ ಗ್ರಾಮದ ಕುಮಾರೇಶ್ವರ ಸೇವಾ ಸಮಿತಿ ವತಿಯಿಂದ ಅಭಿನವ ಅನ್ನದಾನ ಶ್ರೀಗಳಿಗೆ ರಕ್ತದಾನದ ಮೂಲಕ ತುಲಾಭಾರ ಕಾರ್ಯಕ್ರಮ ಆಯೋಜಿಸಿತ್ತು.
ಡಾ ಅಭಿನವ ಅನ್ನದಾನ ಶ್ರೀಗಳು 70 ಕೆಜಿ ಭಾರವಿದ್ದು, ಅವರ ತೂಕದಷ್ಟು ರಕ್ತ ಸಂಗ್ರಹವಾಗಬೇಕಾದಲ್ಲಿ 250 ಯುನಿಟ್ ರಕ್ತ ಬೇಕಾಗಿತ್ತು. ಆದರೆ, ಸೋಮವಾರ ಶ್ರೀಗಳ ಮೇಲಿನ ಭಕ್ತಿಯಿಂದ ಗ್ರಾಮದ 620 ಜನರು ರಕ್ತದಾನ ಮಾಡಿದ್ದು, ಈ ಪೈಕಿ 178ಕ್ಕೂ ಹೆಚ್ಚು ಮಹಿಳೆಯರಿದ್ದರು. ಸ್ವಯಂ ಪ್ರೇರಣೆಯಿಂದ ಎಲ್ಲರೂ ರಕ್ತದಾನಮಾಡಿದ್ದು ಹೊಸ ಮೈಲುಗಲ್ಲು ರೂಪಿಸಿತು.
2.50 ಕ್ವಿಂಟಲ್ ರಕ್ತ ಸಂಗ್ರಹ: ಶ್ರೀಗಳ ತುಲಾಭಾರಕ್ಕೆ ಬೇಕಾಗಿದ್ದು 70 ಕೆಜಿ ರಕ್ತ. ಆದರೆ, ಸೋಮವಾರ ಗ್ರಾಮದ ಭಕ್ತರು ನೀಡಿದ ರಕ್ತ 2.50 ಕ್ವಿಂಟಲ್ ಆಗಿತ್ತು. ದೇಶದಲ್ಲಿ ಒಂದೇ ದಿನ, ಒಂದೇ ಕಾರ್ಯಕ್ರಮದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರಕ್ತದಾನವಾಗಿದ್ದು ಐತಿಹಾಸಿಕ ದಾಖಲೆಯಾಗಿದೆ. ಇದನ್ನು ಸಂಘಟಕರು ಲಿಮ್ಕಾ ದಾಖಲೆಗೆ ಸಲ್ಲಿಸುವ ಚಿಂತನೆಯಲ್ಲಿದ್ದು, ಸದ್ಯದಲ್ಲೇ ಶ್ರೀ ಮಠದ ಭಕ್ತರು ಕಾರ್ಯಪ್ರವೃತ್ತರಾಗಲಿದ್ದಾರೆ.
ವೈದ್ಯರ ತಂಡ: ಬೃಹತ್ ರಕ್ತ ಸಂಗ್ರಹಣ ಶಿಬಿರದಲ್ಲಿ ಬಳ್ಳಾರಿ ಮತ್ತು ಗಂಗಾವತಿ ರಕ್ತ ಭಂಡಾರಗಳ ಹಿರಿಯ ವೈದ್ಯಾಧಿಕಾರಿಗಳು ಮತ್ತು ಕಿಮ್ಸ್ ರಕ್ತ ಸಂಗ್ರಹಣ ವಿಭಾಗದ ವೈದ್ಯರು, 35 ನುರಿತ ವೈದ್ಯ ಸಹಾಯಕರು 10 ಮಹಿಳಾ ದಾದಿಯರು ರಕ್ತ ಸಂಗ್ರಹದಲ್ಲಿ ಕೈ ಜೋಡಿಸುವ ಮೂಲಕ, ಧನ್ಯ ಕ್ಷಣಗಳಿಗೆ ಸಾಕ್ಷಿಯಾದರು. ಸಂಗ್ರಹವಾದ ರಕ್ತವನ್ನು ಬಳ್ಳಾರಿ, ಹುಬ್ಬಳ್ಳಿಗೆ ರವಾನೆ ಮಾಡಲಾಯಿತು ಎಂದು ಹಿರಿಯ ವೈದ್ಯರು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು.
-ಶಿವಕುಮಾರ ಕುಷ್ಟಗಿ
Advertisement