ಗದಗ: ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಯಂತೆ ಪ್ರತಿ ವರ್ಷ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ವ್ಯಯಕ್ಕಿಂತ, ಈ ವರ್ಷ ನೀರಾವರಿಗಾಗಿ ರು. 11030 ಕೋಟಿ ಖರ್ಚು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ರೋಣ ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ಹಿರಿಯ ಶ್ರೀಗಳ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಸಮರ್ಪಕ ಜಾರಿಗೊಳಿಸಿ ರೈತರ ಬದುಕಿನಲ್ಲಿ ಹೊಸ ಆಯಾಮ ಸೃಷ್ಟಿಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲು ವಿಶೇಷ ಯೋಜನೆ ಚಾಲನೆಯಲ್ಲಿದ್ದು, ಪ್ರತಿವರ್ಷ ರು. 40 ಕೋಟಿ ಖರ್ಚು ಮಾಡಲು ಕ್ರಮ ಕೈಗೊಂಡಿದೆ ಎಂದರು.
ಮಳೆಯಾಧರಿಸಿ ಕೃಷಿ ಮಾಡುತ್ತಿರುವ ಪ್ರದೇಶದಲ್ಲಿ ಒಣಬೇಸಾಯ ಅಭಿವೃದ್ಧಿ ನೀತಿ ಜಾರಿ ಮಾಡಿದ್ದು, ಅದಕ್ಕಾಗಿ ಬಜೆಟ್ನಲ್ಲಿ ರು. 500 ಕೋಟಿ ಮೀಸಲಿಟ್ಟಿದೆ. ಬೆಲೆ ಕುಸಿತದಿಂದ ತತ್ತರಿಸಿದ ರೈತರ ನೆರವಿಗಾಗಿ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಕೃಷಿ ಬೆಲೆ ನೀತಿ ಆಯೋಗ ರಚಿಸಿದ್ದು, ಇದು ರಾಜ್ಯಗಳ ಮಟ್ಟದಲ್ಲಿ ಕರ್ನಾಟಕದಲ್ಲಿ ಮಾತ್ರ.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಬಡವರಿಗೆ ರು. 1ಕ್ಕೆ 1 ಕೆಜಿ ಅಕ್ಕಿ ನೀಡುತ್ತಿರುವುದರಿಂದ ದುಡಿಯಲು ಜನರೇ ಬರುತ್ತಿಲ್ಲ ಎಂದು ಕೆಲವರು ನನ್ನನ್ನು ಟೀಕಿಸುತ್ತಾರೆ. ಟೀಕಿಸಲಿ, ಟೀಕೆ ರಚನಾತ್ಮಕವಾಗಿರಲಿ. ರಾಜಕೀಯ ಉದ್ದೇಶ ಇರಬಾರದು. ಟೀಕಿಸುವವರಿಗೆ ಹಸಿವಿನ ಬೆಲೆ ಗೊತ್ತಿಲ್ಲ. ಹಸಿದವನಿಗೆ ಅದರ ಅರಿವಾಗುತ್ತದೆ ಎಂದು ತಮ್ಮ ಬಾಲ್ಯದಲ್ಲಿ ಘಟನೆ ಸ್ಮರಿಸಿಕೊಂಡರು.
Advertisement