ನರೇಗಲ್ಲ: ನೀವು ಏನಾದರೂ ಆಗಿ ಮೊದಲು ಮಾನವರಾಗಿ. ನಿಮ್ಮ ಪ್ರತಿಭೆಯನ್ನು ವಿಧ್ವಂಸಕ ಕೃತ್ಯಗಳಿಗೆ ಬಲಿಕೊಡಬೇಡಿ ಎಂದು ಬೆಳಗಾವಿ ನಾಗನೂರು-ರುದ್ರಾಕ್ಷಿ ಮಠದ ಡಾ. ಸಿದ್ಧರಾಮ ಶ್ರೀಗಳು ಹೇಳಿದರು.
ಅವರು ಸಮೀಪದ ಹಾಲಕೆರೆಯಲ್ಲಿ ನಡೆದಿರುವ ಹಿರಿಯ ಅನ್ನದಾನ ಮಹಾಸ್ವಾಮಿಗಳವರ ಪುಣ್ಯಾರಾಧನೆಯ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಭಾನುವಾರ ಶೇ. 95ಕ್ಕಿಂತ ಹೆಚ್ಚು ಅಂಕ ಗಳಿಸಿದ 2001 ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ನೀಡಲಾದ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನವಲಗುಂದದ ಬಸವಲಿಂಗ ಶ್ರೀಗಳು ಮಾತನಾಡಿ, ಸಾಧನೆಗೆ ಯಾವ ನೆಪವೂ ಬೇಕಿಲ್ಲ. ಇಷ್ಟಕ್ಕೆ ನಿಮ್ಮ ಸಾಧನೆ ಮುಕ್ತಾಯವಾದಂತಲ್ಲ. ಇದು ಪ್ರಾರಂಭ ಮಾತ್ರ. ನಾಡಿನ ಜನತೆಯ ಉದ್ಧಾರಕ್ಕಾಗಿ ಅವತಾರ ತಾಳಿ ಬಂದವರು ಹಾಲಕೆರೆಯ ಹಿರಿಯ ಅನ್ನದಾನ ಶ್ರೀಗಳು. ಇಂದು ಅವರಿಂದ ನೀವುಗಳು ಆಶೀರ್ವಾದ ಪಡೆದಿರುವುದು ನಿಮ್ಮ ಜೀವನದ ಭಾಗ್ಯ ಎಂದರು.
ಸನ್ಮಾನಿತರ ಪರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅನಿಲ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಇಳಕಲ್ಲ ವಿಜಯ ಮಹಾಂತ ಶ್ರೀಗಳು ಆಶೀರ್ವಚನ ನೀಡಿ, ನಮ್ಮ ಅಂತರಂಗದಲ್ಲಿಯೇ ದೇವರಿದ್ದಾನೆ. ಅವನನ್ನು ಅರಿಯಲು ಪ್ರಯತ್ನಿಸಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಫಕೀರಸಿದ್ದರಾಮ ಶ್ರೀಗಳು ಮಾತನಾಡಿ, ಊರಾಗಿನ ಕೆರಿಯಾಗ ನೀರು ಇರಬೇಕು, ಮಠದಾಗ ಸ್ವಾಮಿ ಇರಬೇಕು. ಹಾಲಕೆರೆ ಮಠದಲ್ಲಿ ಇರುವ ಡಾ. ಅಭಿನವ ಅನ್ನದಾನ ಶ್ರೀಗಳು ನೀರಿನಂತೆ ಇದ್ದು ಎಲ್ಲರೊಂದಿಗೂ ಬೆರೆಯುವ ಗುಣವನ್ನು ಹೊಂದಿದ್ದಾರೆ ಎಂದರು. ಡಾ. ಎನ್.ಬಿ. ಪಾಟೀಲ, ಡಾ. ಅಭಿನವ ಅನ್ನದಾನ ಶ್ರೀಗಳು ಆಶೀರ್ವಚನ ನೀಡಿದರು.
Advertisement