ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 5
ಪಟ್ಟಣದ ಯಲಿಸಿರುಂದ ರಸ್ತೆ ಪಕ್ಕದ ಉರ್ದು ಶಾಲೆಗೆ ಹೊಂದಿಕೊಂಡಿರುವ ಆಶ್ರಯ ಮನೆಗೆಂದು ಮೀಸಲಿಟ್ಟ 207 ಪ್ಲಾಟ್‌ಗಳಲ್ಲಿ ತಹಸೀಲ್ದಾರ್, ಪಟ್ಟಣ ಪಂಚಾಯಿತಿಯವರು ಸೇರಿ ನಿವೇಶನ ಹಕ್ಕು ಪತ್ರ ವಿತರಣೆ ಮಾಡಿದ್ದು, ಹಕ್ಕು ಪತ್ರಕ್ಕೆ ಚೆಕ್‌ಬಂದಿ, ವಿತರಿಸಿದ ದಿನಾಂಕ ಹಾಕದೇ ತಹಸೀಲ್ದಾರ್ ಸಹಿ ಮಾಡಿ ಫಲಾನುಭವಿಗಳಿಗೆ ನೀಡಿ ಗೋಳಾಡುವಂತೆ ಮಾಡಿದ್ದಾರೆ.
ಶಿರಹಟ್ಟಿ ಪಪಂನಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ದಾಖಲಾಗಿರುವ ದೂರಿನ ತನಿಖೆ ಕುರಿತು ಲೋಕಾಯುಕ್ತ ಅಧೀಕ್ಷಕ ಎಂಜಿನಿಯರ್ ಬಿ. ದೊರೆಸ್ವಾಮಿ ಅವರು ಆ. 6, 7ರಂದು ಸದರಿ ದೂರಿಗೆ ಸಂಬಂಧಿಸಿದ ಸ್ಥಳ ಪರಿಶೀಲನೆ ಹಮ್ಮಿಕೊಂಡಿದ್ದಾರೆ.
ಹಾಸಿಮಸಾಬ ಖಾರಬೂದಿ, ಹಸನಸಾಬ ಮಜ್ಜೂರ, ಮಾಬೂಬಿ ಅಂಬಡಗಟ್ಟಿ ಸೇರಿದಂತೆ ಅನೇಕರಿಗೆ ಮನೆ ಹಕ್ಕು ಪತ್ರ ನೀಡಲಾಗಿದೆ. ವಿಪರ್ಯಾಸವೆಂದರೆ ನಾಲ್ಕು ವರ್ಷ ಗತಿಸಿದರೂ ಇವರಿಗೆ ನಿವೇಶನ ಎಲ್ಲಿದೆ ಎಂಬುದೇ ಸಿಗುತ್ತಿಲ್ಲ.
ಬದಲಾಗಿ ಶಿರಹಟ್ಟಿ ಪಟ್ಟಣ ಪಂಚಾಯಿತಿ ದಾಖಲೆಗಳಲ್ಲಿ ಇವರ ಬದಲು ಈ ಹಿಂದಿನ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿ ಸೇರಿ ಚಾಂದಬಿ ಕಲಾರಿ, ಸುಮಿತ್ರಾ ವಿರೂಪಾಕ್ಷಪ್ಪ ಲಕ್ಷ್ಮೇಶ್ವರ, ಅಂಜಮ್ಮ ಭೀಮಪ್ಪ ಮಾನೆ ಎಂಬುವವರ ಹೆಸರಿನಲ್ಲಿ ದಾಖಲು ಮಾಡಿ ಉತಾರ ನೀಡಿ ಮೊದಲು ಹಕ್ಕು ಪತ್ರ ಪಡೆದದವರಿಗೆ ವಂಚನೆ ಮಾಡಿದ್ದಾರೆ. ಈ ಅವ್ಯವಹಾರ ಮತ್ತು ಅಚಾತುರ್ಯ ಘಟನೆಗೆ ಸಂಬಂಧಿಸಿದಂತೆ ಹಾಲಿ ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್. ಕುಲಕರ್ಣಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಪ ವಿಭಾಗಾಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಿ ಕೊಡದೇ ಬೇಜವಾಬ್ದಾರಿ ತೋರಿದ್ದಾರೆ.
ಇವರ ವರ್ತನೆಗೆ ಬೇಸತ್ತ ಸದಸ್ಯ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಗೆ ಜು. 28ರಂದು ಲಿಖಿತ ದೂರು ನೀಡಿದ್ದಾರೆ.
ಮೇಲಿನ ಅವ್ಯವಹಾರಗಳಲ್ಲದೇ ಮಾಗಡಿ ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ಎನಾರ್ಕನ್ ಇಂಡಿಯಾ ಕಂಪನಿಯವರಿಗೆ ಜಿಲ್ಲಾಧಿಕಾರಿ ಆದೇಶವನ್ನು ಗಾಳಿಗೆ ತೂರಿ ಉದ್ಯಾನವನ, ರಸ್ತೆ, ವಾಹನ ನಿಲುಗಡೆಗೆ ಮೀಸಲಿದ್ದ ಪಪಂ ಜಾಗೆಯನ್ನು ಕಂಪನಿಯ ಹೆಸರಿಗೆ ದಾಖಲಿಸಿದ್ದಾರೆ. ಕಂಪನಿ ಭರಿಸಿದ ತೆರಿಗೆ ಹಣವನ್ನು ಸರ್ಕಾರಕ್ಕೆ ತುಂಬದೇ ನುಂಗಿ ಹಾಕಿದ್ದಾರೆ ಎಂದು ಲಿಖಿತವಾಗಿ ದೂರು ನೀಡಲಾಗಿದೆ.
ಇನ್ನೂ ಅನೇಕ ಅವ್ಯವಹಾರ ನಡೆದಿರುವ ಬಗ್ಗೆ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿದರೂ ಒಮ್ಮೆಯೂ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರ ಹಣ ಕೊಳ್ಳೆ ಹೊಡೆದ ಜನಪ್ರತಿನಿಧಿಗಳ ಮೇಲೆ ಯಾವುದೇ ಕ್ರಮಕ್ಕೂ ಮುಂದಾಗದೇ ಇರುವುದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದ್ದು, ಇವರ ಮೇಲೂ ಲೋಕಾಯುಕ್ತ ಅಧಿಕಾರಿಗಳಿಗೆ ದೂರ ನೀಡಿರುವುದಾಗಿ ಸದಸ್ಯ ಜೆ.ಆರ್. ಕುಲಕರ್ಣಿ ಲಿಖಿತ ಪತ್ರ ನೀಡಿ ಆರೋಪಿಸಿದ್ದಾರೆ.
ಲೋಕಾ ಅಧಿಕಾರಿಗಳಿಂದಲಾದರೂ ತಪ್ಪಿತಸ್ಥರಿಗೆ ಶಿಕ್ಷೆ, ಅರ್ಹರಿಗೆ ನ್ಯಾಯ ಸಿಗುವಂತಾಗಬೇಕು ಎಂದು ಪಪಂ ಸದಸ್ಯ ಜೆ.ಆರ್. ಕುಲಕರ್ಣಿ ಆಗ್ರಹಿಸಿದ್ದಾರೆ.
Advertisement