ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 6
ಪಟ್ಟಣದ ನವನಗರ, ಶಬ್ಬೀರ ನಗರ, ಮ್ಯಾಗೇರಿ ಓಣಿ, ಡಬಾಲಿಯವರ ಮನೆ ಪಕ್ಕ ಕೈಗೊಂಡ ಪರಸಿಕಲ್ಲು ಜೋಡಣೆ, ಚರಂಡಿ ನಿರ್ಮಾಣ ಕಾಮಗಾರಿ ಪರಿಶೀಲನೆ ವೇಳೆ ಪಪಂ ಕಿರಿಯ ಅಭಿಯಂತರ ಜೆ.ಕೆ. ಉಳ್ಳಟ್ಟಿ ಅವರಿಗೆ ಲೋಕಾಯುಕ್ತ ತನಿಖಾಧಿಕಾರಿ ಹಾಗೂ ಅಧೀಕ್ಷಕ ಎಂಜಿನಿಯರ್ ಕಾಮಗಾರಿಗೆ ಸಂಬಂಧಿಸಿದ ದಾಖಲೆ ತೋರಿಸಲು ಕೇಳಿದರೆ ಪರದಾಡಿದ ಘಟನೆ ಬುಧವಾರ ನಡೆಯಿತು.
ಪಟ್ಟಣದಲ್ಲಿ ಕೋಟ್ಯಂತರ ವೆಚ್ಚದಲ್ಲಿ ಕೈಗೊಂಡ ಯಾವುದೇ ಕಾಮಗಾರಿಗಳ ಮೂಲ ದಾಖಲೆಗಳಿಲ್ಲ. ಕ್ರಿಯಾ ಯೋಜನೆಯಲ್ಲಿ ತೋರಿಸಿದ ಕಾಮಗಾರಿ ಆ ಸ್ಥಳದಲ್ಲಿ ನಡೆದೇ ಇಲ್ಲ. ಇವೆಲ್ಲವನ್ನು ಗಮನಿಸಿದ ಲೋಕಾಯುಕ್ತ ತನಿಖಾಧಿಕಾರಿ ಬಿ. ದೊರೆಸ್ವಾಮಿ ತಬ್ಬಿಬ್ಬಾದರು. ನವನಗರದಲ್ಲಿ ರಸ್ತೆ ಮೇಲೆಯೇ ಅಕ್ರಮ ಮನೆ ಕಟ್ಟಿಕೊಂಡಿರುವುದನ್ನು ಗಮನಿಸಿದ ಅವರು, ಇದೆಲ್ಲ ಹೇಗೆ ನಡೆದಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಭಿಯಂತರ ಬಡಾವಣೆಯ ನಕಾಶೆಯೇ ನಮ್ಮಲ್ಲಿಲ್ಲ, ಅದಕ್ಕೆ ಇಷ್ಟೆಲ್ಲ ಅವಾಂತರ ನಡೆದಿವೆ ಎನ್ನುವ ಸಂಶಯದ ಮಾತು ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಐದು ಕಡೆ ಕಾಮಗಾರಿ ಪರಿಶೀಲಿಸಿದ್ದು, ಕಾಮಗಾರಿ ಕೈಗೊಂಡ ಬಗ್ಗೆ ಸಂಪೂರ್ಣ ದಾಖಲೆ ನೀಡುವಂತೆ ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ಕೇಳಿದ ಮಾಹಿತಿ ಕೊಡದಿದ್ದರೆ ಅವರು ನೀಡುವ ಮಾಹಿತಿಗಾಗಿ ಕಾಯದೇ ಅಭಿಯಂತರರ ಬೇಜವಾಬ್ದಾರಿತನ ಕುರಿತು ಲೋಕಾಯುಕ್ತ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.
ಜೊತೆಗೆ ಲೋಕಾಯುಕ್ತ ತನಿಖಾ ಅಧಿಕಾರಿಗಳು ಪಪಂನಲ್ಲಿ ನಡೆದಿರುವ ಕಾಮಗಾರಿ ಪರಿಶೀಲನೆಗೆ ಬರುವುದಾಗಿ ಒಂದು ವಾರ ಮೊದಲೇ ಪತ್ರ ಬರೆದು ಇಲಾಖೆಗೆ ತಿಳಿಸಿದ್ದರೂ ಮುಖ್ಯಾಧಿಕಾರಿ ಎಂ.ಎ. ಬಿಸೆ ಹಾಜರಿ ಪುಸ್ತದಲ್ಲಿ ಸಹಿ ಮಾಡಿ ನಮಗೆ ಭೇಟಿಯಾಗದೇ ಈ ಸಂದರ್ಭದಲ್ಲಿ ಗೈರ ಹಾಜರಿರುವ ಬಗ್ಗೆಯೂ ವರದಿ ನೀಡುವುದಾಗಿ ತಿಳಿಸಿದರು.
ಅಸಮಾಧಾನ: ಲೋಕಾಯುಕ್ತ ತನಿಖಾಧಿಕಾರಿ ಬಿ. ದೊರೆಸ್ವಾಮಿ ಅವರು ದೂರುದಾರರು ನೀಡಿದ ದಾಖಲೆ ತರದೇ, ಕಾಮಗಾರಿಯ ಮಾಹಿತಿ ಮತ್ತು ಸರ್ಕಾರಿ ಸುತ್ತೋಲೆಯನ್ನು ಗಣನೆಗೆ ತೆಗೆದುಕೊಳ್ಳದೇ ಅಭಿಯಂತರ ಮತ್ತು ಗುತ್ತಿಗೆದಾರರನ್ನು ಪಕ್ಕದಲ್ಲಿ ಕರೆದುಕೊಂಡು ಕಾಮಗಾರಿ ಪರಿಶೀಲನೆ ಮಾಡಿದ್ದು, ನಿಮ್ಮಿಂದ ಪಾರದರ್ಶಕ ತನಿಖೆ ನಡೆಯುತ್ತಿಲ್ಲ. ಕಳ್ಳರನ್ನೇ ಪಕ್ಕಕ್ಕೆ ಇಟ್ಟುಕೊಂಡು ಪರಿಶೀಲನೆ ಮಾಡಿದರೆ ಸತ್ಯ ಹೊರಬರಲು ಸಾಧ್ಯವಿಲ್ಲ. ನೀವು ಯಾವ ಆಧಾರದ ಮೇಲೆ ತನಿಖೆ ಮತ್ತು ಪರಿಶೀಲನೆ ಮಾಡುತ್ತಿದ್ದೀರಿ ಎಂದು ಪಪಂ ಸದಸ್ಯ ಸಿ.ಕೆ. ಮುಳಗುಂದ, ಜೆ.ಆರ್. ಕುಲಕರ್ಣಿ ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು. ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಡಂಬಳ ಅವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸುವುದಾಗಿ ದೂರುದಾರರಿಗೆ ನೋಟಿಸ್ ನೀಡಿದ್ದು, ಅವರು ನೀಡಿದ ದೂರಿನ ಕಾಮಗಾರಿ ಪರಿಶೀಲನೆ ಮಾಡದೇ ಅಭಿಯಂತರ ತೋರಿಸಿದ ಕಾಮಗಾರಿ ಪರಿಶೀಲನೆ ಮಾಡುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ರಾಮಣ್ಣ ಡಂಬಳ ಅವರು ನೀಡಿದ ದೂರಿನ ತನಿಖೆ ಮಾಡುತ್ತಿಲ್ಲ ಎಂದು ಒಪ್ಪಿಗೆ ಪತ್ರ ಬರೆದುಕೊಡಿ ಎಂದು ಪಟ್ಟು ಹಿಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಮಾಜಿ ಅಧ್ಯಕ್ಷ ರಾಮಣ್ಣ ಡಂಬಳ, ಸದಸ್ಯ ಸಂತೋಷ ಕುರಿ, ಬುಡನಶ್ಯಾ ಮಕಾನದಾರ, ಮಾಹಿತಿ ಹಕ್ಕು ಕಾರ್ಯಕರ್ತ ಎಂ.ಎ. ವಳ್ಳೆಸಾಬನವರ, ರಿಯಾಜ ಫಣಿಬಂಧ, ಸುರೇಶ ಅಕ್ಕಿ, ಯಲ್ಲಪ್ಪ ಇಂಗಳಗಿ ಇದ್ದರು.
Advertisement