ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜು. 19
ಗದಗ-ಬೆಟಗೇರಿ ಸೇರಿ ಜಿಲ್ಲೆಯಾದ್ಯಂತ ಟಂಟಂ (ಆಟೋ) ಇಂದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಪ್ರಮುಖ ಸಾರಿಗೆ ಸಾಧನಗಳಾಗಿ ಮಾರ್ಪಟ್ಟಿವೆ. ಒಂದೇ ಟಂಟಂನಲ್ಲಿ 10ಕ್ಕೂ ಹೆಚ್ಚು ಮಕ್ಕಳನ್ನು ಕೂಡ್ರಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಇದಕ್ಕೆ ಕಡಿವಾಣ ಹಾಕುವ ಇಲಾಖೆಗಳು ಮಾತ್ರ ನಿದ್ರೆಗೆ ಜಾರಿವೆ.
ಆಟೋದಲ್ಲಿ ಚಾಲಕ ಎಲ್ಲಿದ್ದಾನೆಂದು ಹುಡುಕುವ ಹಾಗೆ ಮಕ್ಕಳನ್ನು ತುಂಬುತ್ತಾರೆ. ವಾಹನ ನಡೆಸಲು ತೊಂದರೆಯಾಗುತ್ತಿದ್ದರೂ ಹಣದ ಆಸೆಗಾಗಿ ಆಟೋ ಚಾಲಕರು ಹೆಚ್ಚೆಚ್ಚು ಮಕ್ಕಳನ್ನು ಆಟೋಗಳಲ್ಲಿ ಹಾಕುತ್ತಿದ್ದಾರೆ. ಇನ್ನು ಗದಗ- ಬೆಟಗೇರಿ ಪ್ರಮುಖ ರಸ್ತೆಗಳ ಸ್ಥಿತಿ ಅಯೋವುಯವಾಗಿದ್ದು, ಅಗತ್ಯಕ್ಕಿಂತ ಹೆಚ್ಚು ರೋಡ್ ಬ್ರೇಕ್ ಹಾಕಲಾಗಿದೆ. ಇದು ಕೂಡಾ ತೊಂದರೆಗೆ ಪ್ರಮುಖ ಕಾರಣವಾಗಿದೆ.
ಸ್ಪಷ್ಟ ನಿಯಮ ಉಲ್ಲಂಘನೆ
ಒಂದು ಆಟೋದಲ್ಲಿ ನಾಲ್ಕರಿಂದ ಆರು ಮಕ್ಕಳನ್ನು ಮಾತ್ರ ಹಾಕಬಹುದು. ಇದು ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಯೇ ರೂಪಿಸಿರುವ ನಿಯಮ. ನಗರದ ಪ್ರತಿ ವೃತ್ತದಲ್ಲೂ ಸಾಕಷ್ಟು ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಇದ್ದರೂ ಅವರ ಸಮ್ಮುಖದಲ್ಲಿಯೇ ಒಂದೇ ಆಟೋದಲ್ಲಿ 10ಕ್ಕೂ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಿದ್ದು, ಅಧಿಕಾರಿಗಳ ಸಮ್ಮುಖದಲ್ಲಿಯೇ ಸಾರಿಗೆ ನಿಯಮ ಉಲ್ಲಂಘನೆಯಾಗುತ್ತಿದೆ.
ಜಿಲ್ಲೆಯಾದ್ಯಂತ ವ್ಯಾಪಕ
ಈ ಸಮಸ್ಯೆ ಗದಗ- ಬೆಟಗೇರಿ ಮಾತ್ರವಲ್ಲ, ಜಿಲ್ಲೆಯ ಎಲ್ಲ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಶಿಕ್ಷಣಕ್ಕಾಗಿ ಬರುವ ಮಕ್ಕಳು ಸಹಿತ ಇವುಗಳನ್ನೇ ಆಶ್ರಯಿಸಿದ್ದು, ಒಂದೇ ವಾಹನದಲ್ಲಿ ಅತಿಯಾದ ಮಕ್ಕಳನ್ನು 10 ರಿಂದ 15 ಕಿಮೀ ದೂರದಲ್ಲಿರುವ ಗ್ರಾಮಗಳಿಂದ ಕರೆ ತರಲಾಗುತ್ತಿದೆ. ವಾಹನದ ಹಿಂದೆ ಮಕ್ಕಳನ್ನು ಕೂಡ್ರಿಸಿ ವೇಗದಿಂದ ವಾಹನ ಚಲಾಯಿಸುವುದು ಸಾಮಾನ್ಯವಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು, ಆರ್ಟಿಒ ಇದಕ್ಕೆ ಕಡಿವಾಣ ಹಾಕಬೇಕಿದೆ.
ಇದು ಕೇವಲ ಆಟೋ ಅಥವಾ ಟಂಟಂ ಚಾಲಕರ ಲೋಪವಲ್ಲ, ಮುಖ್ಯವಾಗಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಿದೆ. ಹಣ ಕಡಿಮೆಯಾಗುತ್ತದೆ ಎನ್ನುವ ಆಸೆಯಿಂದ ಮಕ್ಕಳನ್ನು ಆಟೋಗಳಿಗೆ ಕಳಿಸುವುದರಿಂದಲೂ ಈ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇನ್ನು ಶಾಲೆಯ ಆಡಳಿತ ಮಂಡಳಿಗಳು ಹೆಚ್ಚೆಚ್ಚು ಮಕ್ಕಳನ್ನು ಕರೆತರುವ ಚಾಲಕರಿಗೆ ತಿಳಿವಳಿಕೆ ನೀಡಬೇಕಿದೆ. ಇದರಲ್ಲಿ ಎಲ್ಲರ ಜವಾಬ್ದಾರಿ ಅಡಗಿದೆ.
ಶಾಲೆಗೆ ಹೋಗುವ ಆಟೋಗಳಲ್ಲಿ ಹೆಚ್ಚೆಚ್ಚು ಮಕ್ಕಳನ್ನು ಹಾಕುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಈ ನಿಟ್ಟಿನಲ್ಲಿ ಪಾಲಕರು ಗಮನ ನೀಡಬೇಕು. ಸಾಧ್ಯವಾದಲ್ಲಿ ತಮ್ಮ ಮಕ್ಕಳನ್ನು ತಾವೇ ಶಾಲೆಗೆ ಬಿಡಬೇಕು. ಇಲ್ಲವೇ ಆಟೋದಲ್ಲಿ ಕಡಿಮೆ ಮಕ್ಕಳನ್ನು ಕರೆದೊಯ್ಯುವಂತೆ ಸೂಚಿಸಬೇಕು. ಇಲ್ಲವೇ ಶಾಲಾ ಬಸ್ಗಳಲ್ಲಿ ಮಕ್ಕಳನ್ನು ಕಳಿಸಬೇಕು.
- ನಾಗೇಶ ಶೆಟ್ಟರ್, ಮಾಲತೇಶ ಚಿಂಚಲಿ, ಪಾಲಕರು
ಈ ಕುರಿತು ಆರ್ಟಿಒ ಪುರುಷೋತ್ತಮ ಅವರನ್ನು ಯಾವಾಗ ಸಂಪರ್ಕಿಸಿದರೂ, ನಾನು ಬ್ಯೂಸಿಯಾಗಿದ್ದೇನೆ, ಅರ್ಧಗಂಟೆ ಬಿಟ್ಟು ಮಾತನಾಡಿ ಎನ್ನುತ್ತಾರೆ. ಅರ್ಧ ಗಂಟೆಯ ನಂತರ ಅವರ ಮೊಬೈಲ್ ನಾಟ್ರಿಚೇಬಲ್ ಆಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳೆ ಈ ರೀತಿ ವರ್ತಿಸುತ್ತಿರುವುದು ಕೂಡಾ ಹಲವು ಅನುಮಾನಕ್ಕೆ ಕಾರಣವಾಗುತ್ತಿದೆ.