ಗಜೇಂದ್ರಗಡ: ಸಮೀಪದ ಬೆಣಚಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಈಚೆಗೆ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಜನಜಾಗೃತಿ ಜಾಥಾ ಜರುಗಿತು. ಈ ಸಂದರ್ಭದಲ್ಲಿ ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಅಶ್ವಿನಿ ಕೊಪ್ಪದ ಮಾತನಾಡಿ, ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಲೇರಿಯಾ, ಡೆಂಘೀ, ಚಿಕೂನಗೂನ್ಯಾ ರೋಗಗಳ ಬಗೆಗೆ ಸಾರ್ವಜನಿಕರು ಜಾಗ್ರತಿ ವಹಿಸಬೇಕು. ಮಲೇರಿಯಾ ಕಣ್ಣಿಗೆ ಕಾಣಿಸದ ಸೂಕ್ಷ್ಮ ಕ್ರಿಮಿ. ಇದಕ್ಕೆ ಪರೊಪ ಜೀವಿ ಎಂದು ಕರೆಯಲಾಗುತ್ತದೆ. ಸೂಕ್ಷ್ಮ ದರ್ಶಕದಿಂದ ಮಾತ್ರ ನೋಡಲು ಸಾಧ್ಯ. ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಗಳು ಮಲೇರಿಯಾ ರೋಗವನ್ನು ಒಬ್ಬರಿಂದೊಬ್ಬರಿಗೆ ಹರಡುತ್ತವೆ. ನಾವು ವಾಸಿಸುವ ಪರಿಸರ ಸ್ವಚ್ಛವಾಗಿರುವ ಜತೆ ನೈರ್ಮಲ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಜತೆಗೆ ಮಲೇರಿಯಾ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿ. ಮುಂಜಾಗ್ರತಾ ಕ್ರಮದಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು. ಉಪನ್ಯಾಸಕ ಐ.ಎಸ್. ರಂಜಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎನ್. ಕುದರಿಮೋತಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮೇಲುಸ್ತವಾರಿ ಅಧ್ಯಕ್ಷ ಅಂದಾನಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷೆ ಸುನಂದಾ ಪಾಟೀಲ, ಎಸ್.ಪಿ. ತಳವಾರ, ಯು.ಎಸ್. ಶಿಂಗ್ಟಾಲೂರಕೇರಿ, ದೊಡ್ಡಪ್ಪ ಮಾಳೋತ್ತರ, ತುಳಜವ್ವ ಪೂಜಾರ, ಹರಿಶ್ಚಂದ್ರಪ್ಪ ಪವಾರ, ಅಂದಪ್ಪ ಅಂಗಡಿ, ಸಂಗೀತಾ ನೆಲ್ಲಿಕೊಪ್ಪ, ಶೇಖಪ್ಪ ಮಾಳೋತ್ತರ, ಕೃಷ್ಣಕುಮಾರ ಕುಲಕರ್ಣಿ ಉಪಸ್ಥಿತರಿದ್ದರು.
ರೋಣ ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ರೋಣ: ರೋಣ ತಾಪಂ 3ನೇ ಅವಧಿ ಅಧ್ಯಕ್ಷರಾಗಿ ಯಾವಗಲ್ ತಾಪಂ ಕ್ಷೇತ್ರದ ಶಿವಾನಂದ ಕಮತಿ ಹಾಗೂ ಉಪಾಧ್ಯಕ್ಷರಾಗಿ ಗೋಗೇರಿ ತಾಪಂ ಮತಕ್ಷೇತ್ರದ ಕವಿತಾ ಡೊಣ್ಣೆಗುಡ್ಡ ಸೋಮವಾರ ಆಯ್ಕೆಯಾದರು. ತಾಪಂ ಒಟ್ಟು 19 ಸದಸ್ಯ ಬಲ ಹೊಂದಿದ್ದು, ಅದರಲ್ಲಿ ಬಿಜೆಪಿಯ 12 ಸದಸ್ಯರು, ಕಾಂಗ್ರೆಸ್ನ 7 ಸದಸ್ಯರಿದ್ದಾರೆ. ಬಿಜೆಪಿಯ ಶಿವಾನಂದಪ್ಪ ಕಮತಿ ಹಾಗೂ ಕವಿತಾ ಡೊಣ್ಣೆಗುಡ್ಡ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಇವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದಿದ್ದರಿಂದ, ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ, ತಾ.ಪಂ. ಅಧ್ಯಕ್ಷರಾಗಿ ಶಿವಾನಂದ ಕಮತಿ, ಉಪಾಧ್ಯಕ್ಷರಾಗಿ ಕವಿತಾ ಡೊಣ್ಣಿಗುಡ್ಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಘೋಷಿಸಿದರು. ತಹಸೀಲ್ದಾರ್ ಎ.ಜಿ. ಪಂಡಿತ, ತಾಪ ಇಒ ಎಸ್.ಎಂ. ಪಿಡಶೆಟ್ಟಿ, ಎನ್.ಆರ್. ಜೋಶಿ ಚುನಾವಣಾ ಪ್ರಕ್ರಿಯೆ ನೆರವೇರಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸೋಮವಾರ ಸಾಯಂಕಾಲ ಪಟ್ಟಣದ ನೀರಾವರಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ ಅವರು ಶುಭ ಹಾರೈಸಿದರು. ಮುಖಂಡರಾದ ಎಂ.ಎಸ್. ಕರಿಗೌಡ್ರ, ಗುರುರಾಜ ಕುಲಕರ್ಣಿ, ವೀರಯ್ಯ ಹಿರೇಮಠ, ಮುತ್ತಣ್ಣ ಲಿಂಗನಗೌಡ್ರ, ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವಂತಪ್ಪ ತಳವಾರ, ಶಂಕ್ರಯ್ಯ ಹಿರೇಮಠ, ಶಂಕರಗೌಡ ಪಾಟೀಲ, ಶರಣಪ್ಪ ಕಂಬಳಿ, ಎಪಿಎಂಸಿ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ಸುಭಾಸ ಹೊಸಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬಡವರ ಸಂಜೀವಿನಿ ಆಯುಷ್ ವೈದ್ಯ ಪದ್ಧತಿ: ಹೊಸಳ್ಳಿ
ಗದಗ: ಆಯುಷ್ ವೈದ್ಯ ಪದ್ಧತಿ ಡವರ ಸಂಜೀವಿನಿಯಾಗಿದೆ ಎಂದು ತಾಪಂ ಸದಸ್ಯ ಪ್ರಹ್ಲಾದ್ ಹೊಸಳ್ಳಿ ಹೇಳಿದರು. ತಾಲೂಕಿನ ಅಡವಿಸೋಮಾಪುರ ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ, ಅಡವಿಸೋಮಾಪುರ ಗ್ರಾಪಂ ಹಾಗೂ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಈಚೆಗೆ ಪಾಪನಾಶಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆಯೋಜಿಸಿದ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಹಾಗೂ ಮೂಲವ್ಯಾಧಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಭಗವಂತ ಭೂಮಿಯನ್ನು ಸೃಷ್ಟಿ ಮಾಡುವ ಪೂರ್ವದಲ್ಲಿಯೇ ಮಾನವ ಹಾಗೂ ಇತರ ಪ್ರಾಣಿ ಪಕ್ಷಿಗಳಿಗೆ ಬರಬಹುದಾದ ಕಸ-ಕಾಯಿಲೆಗಳ ನಿವಾರಣೆಗಾಗಿ ವನಸ್ಪತಿ ಔಷಧಿ ಬೆಳಸಿದ. ಅಂದರೆ ಬ್ರಹ್ಮನಿಂದಲೆ ಸೃಷ್ಠಿಯಾದ ವೈದ್ಯಕೀಯ ಪದ್ಧತಿ ಈ ಆಯುರ್ವೇದ. ಹಾಗಾಗಿ ದಿವ್ಯಶಕ್ತಿ ಹೊಂದಿದ ವನಸ್ಪತಿ ಔಷಧಿಗಳಿಂದ ಚಿಕಿತ್ಸಿಸುವ ಆಯುರ್ವೇದ ವೈದ್ಯ ಪದ್ಧತಿ ಬಡವರ ಪಾಲಿನ ಸಂಜೀವಿನಿ ಎಂದರು. ಶಲ್ಯತಜ್ಞ ಡಾ. ಎಂ.ಡಿ. ಸಮುದ್ರಿ ಮೂಲವ್ಯಾಧಿ ರೋಗ ಮತ್ತು ಅದರ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಜಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಅಡವಿಸೋಮಾಪುರ ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಗದಗ ತಾಪಂ ಅಧ್ಯಕ್ಷೆ ಲಲಿತಾ ಅಣ್ಣಿಗೇರಿ, ಉಪಾಧ್ಯಕ್ಷ ಭೀಮಪ್ಪ ಲಮಾಣಿ, ಗ್ರಾಪಂ ಉಪಾಧ್ಯಕ್ಷೆ ನಾಗವ್ವ ಹುಡೇದ, ಸದಸ್ಯ ಮಾಲಾ ದೊಡ್ಡಮನಿ, ಕಲ್ಲವ್ವ ತಳವಾರ, ಮಲ್ಲಪ್ಪ ಹೊಸಳ್ಳಿ, ಡಾ. ಆರ್.ವಿ. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಡಾ. ಅಶೋಕ ಮತ್ತಿಗಟ್ಟಿ ಸ್ವಾಗತಿಸಿದರು. ತುಕಾರಾಮ ಹುಳಗನ್ನವರ ನಿರೂಪಿಸಿದರು. ಡಾ. ಎಂ.ಎ. ಹಾದಿಮನಿ ವಂದಿಸಿದರು.